ಕಾಡು, ಕೆರೆ ಸಂರಕ್ಷಣೆ ಬಗ್ಗೆ 21ಕ್ಕೆ ವಿಚಾರ ಸಂಕಿರಣ: ವೃಕ್ಷಲಕ್ಷ ಆಂದೋಲನದ ಶ್ರೀಪಾದ ಬಿಚ್ಚುಗತ್ತಿ

KannadaprabhaNewsNetwork |  
Published : Jan 19, 2025, 02:16 AM IST
ಫೋಟೊ:೧೭ಕೆಪಿಸೊರಬ-೦೧ : ಕರ್ನಾಟಕ ವೃಕ್ಷಲಕ್ಷ ಆಂದೋಲನದ ಶ್ರೀಪಾದ ಬಿಚ್ಚುಗತ್ತಿ | Kannada Prabha

ಸಾರಾಂಶ

ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೆರೆಗಳ ಸಂರಕ್ಷಣೆಯ ಕಾರ್ಯತಂತ್ರ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಸಾಗರದ ಎಲ್.ಬಿ.ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ವೃಕ್ಷಲಕ್ಷ ಆಂದೋಲನದ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.

ರಾಜರ ಕಾಲದ ಕೋಟೆ, ಕೆರೆಗಳ ರಕ್ಷಣೆ ಬಗ್ಗೆ ಮಂಥನ

ಕನ್ನಡಪ್ರಭ ವಾರ್ತೆ ಸೊರಬ

ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೆರೆಗಳ ಸಂರಕ್ಷಣೆಯ ಕಾರ್ಯತಂತ್ರ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಸಾಗರದ ಎಲ್.ಬಿ. ಕಾಲೇಜು ಸಭಾಂಗಣದಲ್ಲಿ ಜ.೨೧ ರಂದು ನಡೆಯಲಿದೆ ಎಂದು ಕರ್ನಾಟಕ ವೃಕ್ಷಲಕ್ಷ ಆಂದೋಲನದ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾರಂಪರಿಕ ಐತಿಹಾಸಿಕ ಮೌಲ್ಯ ಇರುವ ರಾಜರ ಕಾಲದ ಕೋಟೆ, ಅರಣ್ಯಗಳು ಹಾಗೂ ಕೆರೆಗಳ ಇಂದಿನ ಪರಿಸ್ಥಿತಿ ಹಾಗೂ ರಕ್ಷಣಾ ಕ್ರಮಗಳು ಬಗ್ಗೆ ತಜ್ಞ ಮಂಥನ ವಿಚಾರ ಸಂಕಿರಣದಲ್ಲಿ ನಡೆಯಲಿದೆ. ಕೋಟೆ ಕಾಡುಗಳು, ಕೋಟೆ ಕೆರೆಗಳ ಸಂರಕ್ಷಣೆಯ ಕಾರ್ಯತಂತ್ರ ಎಂಬ ವಿನೂತನ ವಿಷಯದ ಮೇಲೆ ಸಮಾಲೋಚನೆ, ಸಂವಾದ ನಡೆಸುವ ಉದ್ದೇಶ ಕಾರ್ಯಕ್ರಮದ್ದಾಗಿದೆ. ಸೋಂದಾ, ಬನವಾಸಿ, ಇಕ್ಕೇರಿ, ಕಾನೂರು, ಜಡೆ, ನಗರ, ಅಘನಾಶಿನಿ, ಮಿರ್ಜಾನ ಕೋಟೆಗಳ ಸುತ್ತ ಕೆರೆ, ಕಾನು, ಕಾಡು, ದೇವರಕಾಡುಗಳಿವೆ. ಕೆಲವೆಡೆ ರಕ್ಷಣೆ ಸಿಕ್ಕಿದೆ. ಹಲವೆಡೆ ಈ ಕೋಟೆ ಕಾಡುಗಳು ವಿನಾಶದ ಅಂಚಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇತಿಹಾಸ ತಜ್ಞರು, ಪರಿಸರ ಕಾರ್ಯಕರ್ತರು ಪ್ರಾಚ್ಯವಸ್ತು ಇಲಾಖೆ, ಅರಣ್ಯ ಇಲಾಖೆಯವರು ಸೇರಿ ಕೋಟೆ ಕಾಡುಗಳ ಉಳಿವಿಗೆ ಕಾರ್ಯತಂತ್ರ ರೂಪಿಸಲು ವಿಶೇಷ ಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಊರಿನ ಸುತ್ತ ಕಂದಕ, ಕೆರೆ, ಮಧ್ಯೆ ಕಾಡು, ಐತಿಹಾಸಿಕ ಗುರುತುಗಳು ಇಲ್ಲಿ ಕಾಣಸಿಗುತ್ತವೆ. ಕೆಲವೆಡೆ ಶಾಸನಗಳಿವೆ. ಭಾರತೀಯ ಪರಂಪರೆಯಲ್ಲಿ ಈ ಎಲ್ಲ ಸ್ಥಳಗಳೂ ಐತಿಹಾಸಿಕ ನೈಸರ್ಗಿಕ ಪವಿತ್ರ ತಾಣಗಳಾಗಿವೆ ಎಂಬ ಸಮೀಕ್ಷೆ ಜತೆಗೆ ಮಾಹಿತಿ ಸಂಗ್ರಹ ಆಗಬೇಕು. ಸಂರಕ್ಷಣೆಗೆ ಮುಂದಾದ ಸ್ಥಳೀಯ ರೈತರು, .ಕಾರ್ಯಕರ್ತರ ಸಹಯೋಗ ಇವೆಲ್ಲಕ್ಕಾಗಿ ಜಾಗೃತಿ ಅಭಿಯಾನ, ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ ಹೀಗೆ ಕಾರ್ಯಕ್ರಮ ಸರಣಿ ನಿಶ್ಚಯಿಸಬೇಕು. ಇತಿಹಾಸ ತಜ್ಞರು, ಅಧ್ಯಯನಕಾರರ ಜೊತೆ ಪರಿಸರ ಕಾರ್ಯಕರ್ತರು ಜೊತೆಗೂಡಿ ಮಲೆನಾಡಿನ ಅನನ್ಯ ನಿಸರ್ಗ ಭಂಡಾರದ ಉಳಿವಿಗೆ ಕಾರ್ಯತಂತ್ರ ರೂಪಿಸುವ, ಜೀವವೈವಿಧ್ಯ, ಜಲ, ಅರಣ್ಯ, ಇತಿಹಾಸ, ಪರಂಪರೆ, ಪಶ್ಚಿಮಘಟ್ಟ, ಸಂಶೋಧನೆ, ಸಂರಕ್ಷಣಾ ಕಾರ್ಯತಂತ್ರ ಮೇಳೈಸುವ ಸಮಗ್ರ ಸುಸ್ಥಿರ ಅಭಿವೃಧ್ಧಿ ವಿಷಯ ಕುರಿತ ವಿಚಾರ ಸಂಕಿರಣ ಇದಾಗಿದೆ ಎಂದಿದ್ದಾರೆ.

ವೃಕ್ಷಲಕ್ಷ ಆಂದೋಲನ, ಮರಡವಳ್ಳಿ ಗ್ರಾಮ ಅರಣ್ಯ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಾಗರ ಇವರ ಸಹಕಾರದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಡಾ. ಶೇಜೇಶ್ವರ್ ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಉದ್ಘಾಟಿಸಲಿದ್ದಾರೆ. ಡಾ. ಸುಭಾಷ್ ಮಾಳ್ಕೇಡ್ ಪಿ.ಸಿ.ಸಿ.ಎಫ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆ.ವೆಂಕಟೇಶ್ ೯೮೪೪೨೭೭೭೭೨ ರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್