ಕನ್ನಡಪ್ರಭವಾರ್ತೆ ಕುಶಾಲನಗರ ವಚನ ಸಾಹಿತ್ಯ ವಿಶ್ವ ಸಾಹಿತ್ಯದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಮುನೀರ್ ಅಹ್ಮದ್ ಹೇಳಿದರು.
ಕಾಯಕಕ್ಕೆ ಮಹತ್ವ ಕೊಟ್ಟು ಶರಣರು ಸಮಾಜಕ್ಕೆ ಕೊಟ್ಟ ಅತಿ ದೊಡ್ಡ ಕೊಡುಗೆ ವಚನಗಳು. ದೇಸಿ ನುಡಿಗಳಲ್ಲಿ ರಚನೆಯಾದ ವಚನಗಳು ಕನ್ನಡ ಸಾಹಿತ್ಯ ಸಮಾಜಕ್ಕೆ ಸುಲಭವಾಗಿ ದಕ್ಕುವಂತೆ ಮಾಡಿದವು. ವಚನಕಾರರು ಲೌಕಿಕ ಜೀವನದ ವಾಸ್ತವತೆಯ ಪರಿಚಯ ಮಾಡಿದರು. ಶರಣರ ವಿಚಾರಧಾರೆಗಳನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಅಂದಿನ ಸಮಾಜ ಇರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳಿಗೆ ವಚನಗಳ ಸಾರಾಂಶ ತಿಳಿಸಿಕೊಟ್ಟರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕೊಡಗು ವಿಶ್ವವಿದ್ಯಾಲ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ ಶಾಲಾ, ಕಾಲೇಜುಗಳಲ್ಲಿ ವಚನಗಳ ಅಧ್ಯಯನಕ್ಕೆ ಅವಕಾಶ ಕೊಡಬೇಕು. ಯುವ ಪೀಳಿಗೆ ವಚನಗಳ ಸಾರವನ್ನು ಅರಿತುಕೊಂಡು ಅನುಸರಿಸುವಂತಾಗಬೇಕು ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶರಣ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಶರಣರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಶರಣ ತತ್ವಗಳನ್ನು ಹರಡುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಾಗಿದೆ ಎಂದರು.