ನಾವು ಅವರ ಗ್ರಹಚಾರ ಬಿಡಿಸಲು ಬಂದಿದ್ದೇವೆ

KannadaprabhaNewsNetwork |  
Published : Sep 14, 2026, 01:15 AM IST
55 | Kannada Prabha

ಸಾರಾಂಶ

ಇಂತಹ ಧಾರ್ಮಿಕ ಆಚರಣೆಗೆ ಅನುಮತಿ ಪಡೆಯಲು ಬಂದ ಯುವಕರಿಗೆ ಪೊಲೀಸ್ ಅಧಿಕಾರಿ ಈ ರೀತಿಯಲ್ಲಿ ಮಾತನಾಡುವುದು ಎಷ್ಟು ಸರಿ?

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಸಿಪಿಐ ಧನಂಜಯ್ ಅವರು ಗ್ರಹಚಾರ ಬಿಡಿಸುತ್ತೇನೆ ಎಂದು ಸಂಘಟಕರಿಗೆ ಹೇಳಿದ್ದಾರಂತೆ. ನಾವು ಈಗ ಇಲ್ಲಿಗೆ ಅವರ ಗ್ರಹಚಾರ ಬಿಡಿಸಲು ಬಂದಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನಾವು ಇಂಡಿಯಾದಲ್ಲಿದ್ದೇವೋ, ಪಾಕಿಸ್ತಾನದಲ್ಲಿದ್ದೇವೋ ಎಂಬ ಗೊಂದಲ ಉಂಟಾಗಿದೆ. ಗಣಪತಿ ಹಬ್ಬ, ಗಣೇಶ ಮೆರವಣಿಗೆ ಮತ್ತು ಆಚರಣೆಗೆ ದೀರ್ಘ ಇತಿಹಾಸವಿದೆ. ಇಂತಹ ಧಾರ್ಮಿಕ ಆಚರಣೆಗೆ ಅನುಮತಿ ಪಡೆಯಲು ಬಂದ ಯುವಕರಿಗೆ ಪೊಲೀಸ್ ಅಧಿಕಾರಿ ಈ ರೀತಿಯಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ವಿಚಾರದಲ್ಲಿ ಪೊಲೀಸ್ ಇಲಾಖೆ ಅನಗತ್ಯ ಷರತ್ತುಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದ ಅವರು, ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ಸಮಯದ ಮಿತಿ, ಪಟಾಕಿ ಸಿಡಿಸಬಾರದು, ನಿರ್ದಿಷ್ಟ ರಸ್ತೆಯಲ್ಲಿ ಮೆರವಣಿಗೆ ನಡೆಸಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

“ಗಣಪತಿ ಹಬ್ಬ ಆಚರಿಸಲು ಅನುಮತಿ ಕೇಳುತ್ತಿದ್ದೇವೆ. ನಾವು ಯಾರ ಬಳಿಯೂ ಭಿಕ್ಷೆ ಕೇಳಲು ಬಂದಿಲ್ಲ. ಕಾನೂನು ಪಾಲನೆ ಮಾಡುತ್ತೇವೆ, ಶಾಂತಿಯುತವಾಗಿ ಹಬ್ಬ ಆಚರಿಸುತ್ತೇವೆ. ಆದರೆ ಹಬ್ಬ ಆಚರಿಸುವ ಹಕ್ಕನ್ನೇ ಪ್ರಶ್ನಿಸುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸಬಾರದು ಎಂದು ಅವರು ಹೇಳಿದರು.

ರಸ್ತೆ ನಿಮ್ಮಪ್ಪನದ್ದೂ ಅಲ್ಲ, ನಮ್ಮಪ್ಪನದ್ದೂ ಅಲ್ಲ

ಮೆರವಣಿಗೆ ಸಾಗುವ ರಸ್ತೆಯ ವಿಚಾರವನ್ನು ಪ್ರಸ್ತಾಪಿಸಿದ ಆರ್. ಅಶೋಕ್, ಸಾರ್ವಜನಿಕ ರಸ್ತೆಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕು ಇದೆ.

ರಸ್ತೆ ನಿಮ್ಮಪ್ಪನದ್ದೂ ಅಲ್ಲ, ನಮ್ಮಪ್ಪನದ್ದೂ ಅಲ್ಲ. ಅದು ಪಾಕಿಸ್ತಾನದ್ದೂ ಅಲ್ಲ. ಜನರು ತೆರಿಗೆ ಕಟ್ಟುವ ಸಾರ್ವಜನಿಕ ರಸ್ತೆ. ಯಾವ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬೇಕು, ಯಾವ ರಸ್ತೆಯಲ್ಲಿ ಹೋಗಬಾರದು ಎಂದು ಹೇಳುವ ಅಧಿಕಾರವನ್ನು ಸಿಪಿಐಗೆ ಸಂವಿಧಾನದಲ್ಲಿ ಯಾರು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಒಂದು ಸಮುದಾಯದ ಧಾರ್ಮಿಕ ಆಚರಣೆಗೆ ನಿರ್ಬಂಧ ವಿಧಿಸುವುದು ಸರಿಯಲ್ಲ. ಯಾವುದೇ ಸಮುದಾಯದ ಮೆರವಣಿಗೆಯಾಗಲಿ, ಧಾರ್ಮಿಕ ಆಚರಣೆಯಾಗಲಿ, ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಅವರು ಆಗ್ರಹಿಸಿದರು.

ನಾವು ಯಾರ ಧಾರ್ಮಿಕ ಆಚರಣೆಯನ್ನೂ ವಿರೋಧಿಸುವುದಿಲ್ಲ. ಆದರೆ ಹಿಂದೂಗಳ ಹಬ್ಬ ಬಂದಾಗ ಮಾತ್ರ ಒಂದರ ಮೇಲೊಂದು ಷರತ್ತು ವಿಧಿಸುವುದು ಏಕೆ? ಎಂದು ಅವರು ಪ್ರಶ್ನಿಸಿದರು.

ಹಣೆಗೆ ವಿಭೂತಿ ಹಚ್ಚಿಕೊಂಡಾಕ್ಷಣ ಹಿಂದೂ ಆಗುವುದಿಲ್ಲ

ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಆರ್.ಅಶೋಕ್, ಕಾಂಗ್ರೆಸ್ ನಾಯಕರು ಹಿಂದೂಗಳ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವುದನ್ನು ಟೀಕಿಸಿದರು.

ಮುಖ್ಯಮಂತ್ರಿಗಳೇ ನೀವು ಹಣೆಗೆ ವಿಭೂತಿ ಹಚ್ಚಿಕೊಂಡಾಕ್ಷಣ ಹಿಂದೂ ಆಗುವುದಿಲ್ಲ. ಗಂಗಾ ನದಿಯಲ್ಲಿ ಮುಳುಗಿದರೂ ಹಿಂದೂ ಆಗಲು ಸಾಧ್ಯವಿಲ್ಲ. ಹಿಂದೂಗಳ ಹಬ್ಬ, ಆಚರಣೆ ಮತ್ತು ಭಾವನೆಗಳನ್ನು ಗೌರವಿಸುವ ಮನಸ್ಸು ಇರಬೇಕು ಎಂದು ಅವರು ಹೇಳಿದರು.

ಗಣೇಶೋತ್ಸವ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಸಂಘಟಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಅಧಿಕಾರಿಗಳು ಮಾತನಾಡುವುದು ಸರಿಯಲ್ಲ ಎಂದು ಅಶೋಕ್ ಹೇಳಿದರು.

ಅಮಾನತುಗೊಳಿಸುವವರೆಗೂ ಹೋರಾಟ

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಿಪಿಐ ಧನಂಜಯ್ ಅವರನ್ನು ಅಮಾನತುಗೊಳಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು. ಸಿಪಿಐ ಧನಂಜಯ್ ಅವರನ್ನು ಸಸ್ಪೆಂಡ್ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಟಿ. ನರಸೀಪುರದ ಯುವಕರು ಈ ಹೋರಾಟಕ್ಕೆ ಸಾಥ್ ನೀ ಡಬೇಕು. ಇದು ಒಬ್ಬ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ; ಸಾರ್ವಜನಿಕರ ಹಕ್ಕು ಮತ್ತು ಧಾರ್ಮಿಕ ಆಚರಣೆಯ ಸ್ವಾತಂತ್ರ್ಯದ ವಿಚಾರ ಎಂದು ಅವರು ತಿಳಿಸಿದರು.

ಪೊಲೀಸ್ ಇಲಾಖೆ ಕೂಡಲೇ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸ್ ವರಿಷ್ಠಾಧಿಕಾರಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಮಾನತು ಆದೇಶ ಹೊರಡಿಸಬೇಕು. ಇಲ್ಲವಾದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಸಿಪಿಐ ಅಮಾನತುಗೊಳ್ಳುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಅಗತ್ಯವಿದ್ದರೆ ಪೊಲೀಸ್ ಠಾಣೆಯ ಮುಂದೆಯೇ ಶಾಮಿಯಾನ ಹಾಕಿ ಧರಣಿ ನಡೆಸುತ್ತೇವೆ. ನಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಮುಂದುವರಿಯುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಧನಂಜಯ್ ತೊಲಗಬೇಕು

ಸಿಪಿಐ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಪ್ರತಾಪ್ ಸಿಂಹ, ಧನಂಜಯ್ ಅವರು ಟಿ. ನರಸೀಪುರದಲ್ಲಿ ಮುಂದುವರಿಯಬಾರದು ಎಂದು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಯೊಬ್ಬರು ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಸಾರ್ವಜನಿಕರೊಂದಿಗೆ ಬೆದರಿಕೆಯ ಧಾಟಿಯಲ್ಲಿ ಮಾತನಾಡುವುದು ಅಧಿಕಾರದ ದುರುಪಯೋಗಕ್ಕೆ ಕಾರಣವಾಗಬಹುದು. ಹೀಗಾಗಿ ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಿಪಿಐ ವಿರುದ್ಧ ತಾವು ಮಾಡಿರುವ ಆರೋಪಗಳಿಗೆ ಸೂಕ್ತ ತನಿಖೆ ನಡೆಯಬೇಕು ಎಂದೂ ಪ್ರತಾಪ್ ಸಿಂಹ ಒತ್ತಾಯಿಸಿದರು.

ಗಣೇಶೋತ್ಸವ ವಿಚಾರದಲ್ಲಿ ಜನರು ತೋರಿಸಿರುವ ಒಗ್ಗಟ್ಟು ಮುಂದಿನ ದಿನಗಳಲ್ಲೂ ಮುಂದುವರಿಯಬೇಕು. ಚುನಾವಣೆ ಬಂದಾಗ ನಾವು ಲಿಂಗಾಯತ, ಬ್ರಾಹ್ಮಣ, ಕುರುಬ, ಎಸ್ಸಿ, ಎಸ್ಟಿ ಎಂದು ಪ್ರತ್ಯೇಕವಾಗುತ್ತೇವೆ. ಆದರೆ ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ನಿಲ್ಲಬೇಕು. ಗಣೇಶನ ವಿಚಾರದಲ್ಲಿ ಹೇಗೆ ಒಗ್ಗಟ್ಟಾಗಿದ್ದೀರೋ, ಅದೇ ರೀತಿ ಮುಂದೆಯೂ ಒಗ್ಗಟ್ಟಿನಿಂದ ಇರಬೇಕು ಎಂದು ಅವರು ಹೇಳಿದರು.

ಈ ಹೋರಾಟ ಕೇವಲ ಒಂದು ದಿನದ ಪ್ರತಿಭಟನೆಗೆ ಸೀಮಿತವಾಗಬಾರದು. ಪೊಲೀಸ್ ಇಲಾಖೆ ಹಾಗೂ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಾತನ ಪರಂಪರೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ
ಎಕರೆಗೆ 20 ಸಾವಿರ ಪರಿಹಾರ ನೀಡಿ: ಜಿ.ಸಿ.ಶಂಕರಪ್ಪ ಒತ್ತಾಯ