ಬೀದರ್‌: 17ಕ್ಕೆ ಸೌಹಾರ್ದ ಟಿ10 ಕ್ರಿಕೆಟ್‌ ಪಂದ್ಯಾವಳಿ

KannadaprabhaNewsNetwork | Published : Dec 14, 2023 1:30 AM

ಸಾರಾಂಶ

ಪಂದ್ಯಾವಳಿಯ ಪೋಸ್ಟರ್‌ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಡಿಸಿ, ಸಿಇಒ, ಎಸ್ಪಿ, ಪತ್ರಕರ್ತರು, ಬ್ರಿಮ್ಸ್‌ ಹಾಗೂ ವೆಟರನರಿ ಅಧಿಕಾರಿಗಳ ತಂಡಗಳುಬೀದರ್‌ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಬೀದರ್‌ ಚಾಂಪಿಯನ್ಸ್‌ ಟ್ರೋಫಿ 2023

ಕನ್ನಡಪ್ರಭ ವಾರ್ತೆ ಬೀದರ್‌

ಡಿ.17ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಪೊಲೀಸ್‌ ಹಾಗೂ ಬೀದರ್‌ ಪತ್ರಕರ್ತರ ಕ್ರಿಕೆಟ್‌ ಕ್ಲಬ್‌ ಸಹಯೋಗದಲ್ಲಿ ಆಯೋಜಿಸಲಾಗಿರುವ ಬೀದರ್‌ ಚಾಂಪಿಯನ್ಸ್‌ ಟ್ರೋಫಿ ಸೌಹಾರ್ದ ಟಿ10 ಕ್ರಿಕೆಟ್‌ ಟೂರ್ನಮೆಂಟ್‌ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಪಂದ್ಯಾವಳಿಯ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳು ಹಾಗೂ ಪತ್ರಿಕಾ ಮಾಧ್ಯಮದವರ ಮಧ್ಯದಲ್ಲಿ ಸಮನ್ವಯತೆ ಹಾಗೂ ಸೌಹಾರ್ದತೆಯ ವಾತಾವರಣ ಬೆಳೆಯಲು ಕ್ರೀಡೆ ಸೂಕ್ತ ವೇದಿಕೆಯಾಗಿದೆ ಎಂದರು.

ನೆಹರು ಕ್ರೀಡಾಂಗಣದಲ್ಲಿ ಡಿ.17ರಂದು ನಡೆಯಲಿರುವ ಕ್ರಿಕೆಟ್‌ ಪಂದ್ಯಾವಳಿಗೆ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಪತ್ರಕರ್ತರ ಕ್ರಿಕೆಟ್‌ ಕ್ಲಬ್‌ ಮಾಡಿಕೊಂಡಿದ್ದು, ಜಿಲ್ಲಾಡಳಿತ ಅಗತ್ಯ ಸಹಯೋಗ ನೀಡಲಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಮಾತನಾಡಿ, ಪಂದ್ಯಾವಳಿ ವೈವಿಧ್ಯಮಯವಾಗಿರಲಿ. ಸೌಹಾರ್ದ ಕ್ರಿಕೆಟ್‌ ಟೂರ್ನಿ ಪ್ರತಿಯೊಂದು ಹಂತದಲ್ಲಿ ಮಾದರಿಯಾಗಿರುವಂತೆ ಆಯೋಜಿಸೋಣ. ಪ್ರತಿಯೊಂದು ತಂಡದಲ್ಲಿ 7 ಜನ ಅಧಿಕಾರಿಗಳು ಹಾಗೂ ಇನ್ನುಳಿದ 4 ಜನ ಸಿಬ್ಬಂದಿಯನ್ನು ಆಟಗಾರರನ್ನಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡೋಣ ಎಂದರಲ್ಲದೆ ಪಂದ್ಯಾವಳಿಗೆ ಪೊಲೀಸ್‌ ಇಲಾಖೆ ಕೂಡ ಅಗತ್ಯ ಸಹಯೋಗ ನೀಡಲಿದೆ ಎಂದರು.

ಜಿಪಂ ಸಿಇಒ ಶಿಲ್ಪಾ ಎಂ. ಮಾತನಾಡಿ, ಜಿಲ್ಲಾ ಪಂಚಾಯತ್‌ ವತಿಯಿಂದಲೂ ಕ್ರಿಕೆಟ್‌ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಮುಂದಿನ ದಿನಗಳಲ್ಲಿ ಆರ್‌ಡಿಪಿಆರ್‌ ಅಧಿಕಾರಿ ಹಾಗೂ ಸಿಬ್ಬಂದಿ ಮಧ್ಯ ಪಂದ್ಯಾವಳಿ ಆಯೋಜಿಸಲು ಜಿಲ್ಲಾಧಿಕಾರಿ ನೀಡಿರುವ ಸಲಹೆಯನ್ನು ಶೀಘ್ರದಲ್ಲಿ ಕಾರ್ಯಗತಗೊಳಿಸಲು ಮುಂದಾಗುತ್ತೇವೆ ಎಂದರು.

ಬೀದರ್‌ ಪತ್ರಕರ್ತರ ಕ್ರಿಕೆಟ್‌ ಕ್ಲಬ್‌ ವ್ಯವಸ್ಥಾಪಕ, ಪತ್ರಕರ್ತ ಅಪ್ಪಾರಾವ್‌ ಸೌದಿ ಮಾತನಾಡಿ, ಪಂದ್ಯಾವಳಿಯಲ್ಲಿ ಬೀದರ್‌ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್‌, ಬೀದರ್‌ ಪತ್ರಕರ್ತರ ಕ್ರಿಕೆಟ್‌ ಕ್ಲಬ್‌, ಬ್ರಿಮ್ಸ್‌ ವೈದ್ಯಾಧಿಕಾರಿಗಳ ಹಾಗೂ ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳ ತಂಡ ಸೇರಿದಂತೆ 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಚಾಂಪಿಯನ್ಸ್‌ ಟ್ರೋಫಿ ತಲಾ 10 ಓವರ್‌ಗಳ ಪಂದ್ಯ ಆಗಿರಲಿದೆ. ನಾಕ್‌ ಔಟ್‌ ಟೂರ್ನಿ ಇದಾಗಿದ್ದರಿಂದ ಒಟ್ಟು 5 ಪಂದ್ಯಗಳು ನಡೆಯಲಿವೆ. ಡಿ.17ರಂದು ಬೆಳಗ್ಗೆ 8ರಿಂದ ಪಂದ್ಯಾವಳಿ ಆರಂಭವಾಗಲಿದೆ ಎಂದು ವಿವರಿಸಿದರು.

ಪತ್ರಕರ್ತರ ಕ್ರಿಕೆಟ್‌ ಕ್ಲಬ್‌ ನಾಯಕ ರಾಜಕುಮಾರ ಮಾತನಾಡಿ, ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನೆರವೇರಿಸಲು ಕ್ಲಬ್‌ ಶ್ರಮಿಸುತ್ತಿದೆ ಎಂದರು.

ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ, ಪೃಥ್ವಿರಾಜ್‌ ಹಾಗೂ ಶಶಿಕಾಂತ ಬಂಬುಳಗಿ ಅವರು ಮಾತನಾಡಿ, ಪಂದ್ಯಾವಳಿಯಲ್ಲಿ ಸಮಯಪಾಲನೆ ಬಹುಮುಖ್ಯ. ಪ್ರತಿಯೊಂದು ತಂಡ ನಿಗದಿತ ಸಮಯದೊಳಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದೆಯಾದಲ್ಲಿ ಒಂದು ದಿನದಲ್ಲಿ ಪಂದ್ಯಾವಳಿ ಮುಕ್ತಾಯವಾಗುತ್ತದೆ ಎಂದರು.

ಪತ್ರಕರ್ತರಾದ ಬಾಬು ವಾಲಿ, ಡಿ.ಕೆ ಗಣಪತಿ ಹಾಗೂ ಆನಂದ ದೇವಪ್ಪ ಮಾತನಾಡಿ, ಟ್ರೋಫಿ ವಿಜೇತರಿಗೆ ಹಾಗೂ ಅತ್ಯುತ್ತಮ ಆಟಗಾರರನ್ನು ಗುರುತಿಸಿ ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು, ಟ್ರೋಫಿ ವಿತರಣಾ ಸಮಾರಂಭ ಅದ್ಧೂರಿಯಾಗಿ ಆಯೋಜಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಕರ್ತ ನಂದಕುಮಾರ, ಲಿಂಗೇಶ ಮರಕಲೆ, ಶಿವಾನಂದ, ಬಸ್ಸಯ್ಯ ಸ್ವಾಮಿ ಹಾಗೂ ಸುನೀಲ ಕುಲಕರ್ಣಿ ಅವರು ಮಾತನಾಡಿ, ಪಂದ್ಯಾವಳಿ ವೀಕ್ಷಿಸಲು ಸಾರ್ವಜನಿಕರನ್ನೂ ಆಹ್ವಾನಿಸಬೇಕು, ಕ್ರಿಕೆಟ್‌ ಆಸಕ್ತ ಕಾಲೇಜು ವಿದ್ಯಾರ್ಥಿಗಳನ್ನೂ ನಾವು ಅಲ್ಲಿಗೆ ಕರೆಸೋಣ ಅವರಲ್ಲಿ ಕ್ರೀಡಾಸ್ಪೂರ್ತಿ ಹೆಚ್ಚಿಸಬೇಕು ಎಂದರು.

ವಾರ್ತಾಧಿಕಾರಿ ಸುರೇಶ ಜಿ., ಮುಖ್ಯ ಪಶು ವೈದ್ಯಾಧಿಕಾರಿ ಪಶು ಸಂಗೋಪನಾ ಇಲಾಖೆ ಗೌತಮ ಅರಳಿ, ಜಿಪಂನ ಜಯಪ್ರಕಾಶ, ಪತ್ರಕರ್ತರಾದ ಭೀಮರಾವ್‌ ಬುರಾನಪೂರ, ಮಹೇಶ ಸಜ್ಜನ್‌, ಸಂತೋಷ, ಸಾಗರ ದೇವಪ್ಪ, ಲೋಕೇಶ ಹಾಗೂ ಶಿವಕುಮಾರ ಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

Share this article