ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಟ್ಯಾಬ್ಲೋ ನಿರಾಕರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜಣ್ಣ ಅವರು ಕಳೆದ ವರ್ಷವೂ ಟ್ಯಾಬ್ಲೋನಲ್ಲಿ ನಾರಾಯಣ ಗುರುಗಳ ಭಾವಚಿತ್ರ ನಿರಾಕರಣೆ ಮಾಡಲಾಗಿತ್ತು. ಜನರು ಇದಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದರು. ರಾಷ್ಟ್ರೀಯ ಹಬ್ಬಗಳಲ್ಲಿ ಸಮಾಜ ಸುಧಾಕರಿಗೆ ಅನ್ಯಾಯ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.
ಮುಂದಿನ ವರ್ಷಗಳಲ್ಲಿ ಗೋಡ್ಸೆ ಟ್ಯಾಬ್ಲೋ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ತಳಸಮುದಾಯದಿಂದ ಬಂದಿರುವ ಸಮಾಜ ಸುಧಾರಕ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಮಾಡಿರುವ ಘೋರ ಅಪಮಾನ ಎಂದರು.ದಲಿತರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ: ಕಾಂಗ್ರೆಸ್ ಪಕ್ಷ ದಲಿತರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ. ಎಲ್ಲ ಬಡವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬಡವರು, ದಲಿತರು ಸೇರಿದಂತೆ ಎಲ್ಲ ವರ್ಗದ ಶೋಷಿತರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ.ಎನ್. ರಾಜಣ್ಣ ಅವರು, ಕುಮಾರಸ್ವಾಮಿ ಯಾರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮುದ್ದಹನುಮೇಗೌಡ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಲ್ಲಿಯವರೆಗೆ ಶಾಸಕರ ಬೆಂಬಲ, ಹೈಕಮಾಂಡ್ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿಗಳಿಗೆ ಶಾಸಕರ ಬೆಂಬಲ, ಪಕ್ಷದ ಹೈಕಮಾಂಡ್ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿಗಳಾಗಿ ಇರುತ್ತಾರೆ ಎಂದರು.
ಮೂರು ಡಿಸಿಎಂ ನೇಮಕದ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಹೊಸದಾಗಿ ಆಗುವ ಡಿಸಿಎಂಗಳು ಡಿ.ಕೆ. ಶಿವಕುಮಾರ್ ಅವರ ಫೋರ್ಟ್ ಪೋಲಿಯೋ ಕಿತ್ತೊಳ್ತಾರಾ ಎಂದು ಪ್ರಶ್ನಿಸಿದರು.
ಕೊಬ್ಬರಿ ಬೆಲೆ 15 ಸಾವಿರ ರೂ.: ಕೇಂದ್ರ ಸರ್ಕಾರ ಮೊದಲು ಕ್ವಿಂಟಲ್ ಕೊಬ್ಬರಿಗೆ ಕೊಬ್ಬರಿ 12 ಸಾವಿರ ರು. ಬೆಲೆ ನೀಡಲಿ. ನಂತರ ರಾಜ್ಯ ಸರ್ಕಾರ 3 ಸಾವಿರ ಸೇರಿಸಿ ಕ್ವಿಂಟಲ್‌ಗೆ 15 ಸಾವಿರ ರು. ನೀಡುತ್ತದೆ ಎಂದರು.