ಯೂರಿಯಾ ಕೊರತೆ ಇದೆ. ತಾಲೂಕಿಗೆ ಅತಿ ಕಡಿಮೆ ಪ್ರಮಾಣದ ಯೂರಿಯಾ ಪೂರೈಕೆಯಾಗಿರುವುದು ಕಳವಳಕಾರಿ ಸಂಗತಿ. ಕಳೆದ ವರ್ಷದ ಬೆಳೆವಿಮೆ ಬಾಕಿ ಇದೆ, ಬೆಳೆ ಹೊಂದಾಣಿಕೆಯಾಗದೇ ಸಮಸ್ಯೆಗಳು ಉಂಟಾಗಿವೆ.
ಹಾನಗಲ್ಲ: ತಾಲೂಕಿನ ರೈತರು ಬೆಳೆಹಾನಿ ಬಗ್ಗೆ ಮಾಹಿತಿ ನೀಡಲು ಆ. 14ರ ವರೆಗೆ ಅವಕಾಶ ನೀಡಲಾಗಿದ್ದು, ಉತಾರ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್‌ನೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ತಹಸೀಲಾರ್ ಎಸ್. ರೇಣುಕಾ ತಿಳಿಸಿದರು.ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ರೈತ ಸಂಘ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಮಾತನಾಡಿ, ನಿರಂತರ ಮಳೆ ಬಿದ್ದಿದ್ದರಿಂದ ರೈತರು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಬೆಳೆ ಹಾನಿ ಪರಿಶೀಲನೆ ಅತ್ಯಗತ್ಯ. ಅದಕ್ಕಾಗಿ ತಾಲೂಕಿನಲ್ಲಿ ಬೆಳೆಹಾನಿಯಾದ ರೈತರು ಹಾನಿಯಾದ ಬೆಳೆ, ಉತಾರ, ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಪ್ರತಿಯೊಂದಿಗೆ ನಿಗದಿತ ಅವಧಿಯೊಳಗೆ ಆಯಾ ಹೋಬಳಿಗಳಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಕೃಷಿ ಇಲಾಖೆ ಪರಿಶೀಲಿಸಿ ಬೆಳೆಹಾನಿ ಪರಿಹಾರಕ್ಕೆ ಸರ್ಕಾರಕ್ಕೆ ಮಾಹಿತಿ ನೀಡಲಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕ ಮಾರುತಿ ಅಂಗರಗಟ್ಟಿ ಅವರು, ಜು. 31ರ ವರೆಗೆ ಇನ್ನೂ ಬಿತ್ತನೆ ಅವಕಾಶವಿತ್ತು. ಹೀಗಾಗಿ ಬೆಳೆಹಾನಿ ಪರಿಶೀಲನೆಗೆ ತಾಂತ್ರಿಕ ಅಡಚಣೆ ಇತ್ತು. ಈಗ ಸರ್ವೇ ಕಾರ್ಯಕ್ಕೆ ಮುಂದಾಗುತ್ತೇವೆ. ಬೆಳೆಹಾನಿಯಾದ ರೈತರು ಬಮ್ಮನಹಳ್ಳಿ, ಅಕ್ಕಿಆಲೂರು, ಹಾನಗಲ್ಲ ಹೋಬಳಿಯಲ್ಲಿ ತಮಗೆ ಸಂಬಂಧಿಸಿದ ಹೋಬಳಿಯಲ್ಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅವಧಿ ಮುಗಿದ ತಕ್ಷಣ ವಿಳಂಬವಿಲ್ಲದೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದರು.ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಯೂರಿಯಾ ಕೊರತೆ ಇದೆ. ತಾಲೂಕಿಗೆ ಅತಿ ಕಡಿಮೆ ಪ್ರಮಾಣದ ಯೂರಿಯಾ ಪೂರೈಕೆಯಾಗಿರುವುದು ಕವಳಕಾರಿ ಸಂಗತಿ. ಕಳೆದ ವರ್ಷದ ಬೆಳೆವಿಮೆ ಬಾಕಿ ಇದೆ, ಬೆಳೆ ಹೊಂದಾಣಿಕೆಯಾಗದೇ ಸಮಸ್ಯೆಗಳು ಉಂಟಾಗಿವೆ.
ಈ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸುವ ಕೆಲಸ ಮಾಡಬೇಕು. ಸರ್ಕಾರ ಕೇವಲ ಪರಿಶಿಷ್ಟ ವರ್ಗಕ್ಕೆ ಮಾತ್ರ ಸೀಮಿತಪಡಿಸಿದ ಹನಿ ನೀರಾವರಿ, ಸ್ಪಿಂಕ್ಲರ್ ಸಹಾಯಧನವನ್ನು ಎಲ್ಲ ವರ್ಗದ ರೈತರಿಗೆ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಹಿಂದಿನ ವರ್ಷಗಳ ಸಹಾಯಧನದ ಅನುದಾನ ಇನ್ನೂ ಬಿಡಗಡೆಯಾಗಿಲ್ಲ. ಕೇವಲ ಘೋಷಣೆ ಸಾಲದು. ಸರ್ಕಾರ ಅನುದಾನ ನೀಡಿ ರೈತರ ಸಹಾಯಕ್ಕೆ ನಿಲ್ಲಬೇಕು ಎಂದರು.ಸಭೆಯಲ್ಲಿ ರೈತ ಮುಖಂಡರಾದ ಅಡವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಶ್ರೀಧರ ಮಲಗುಂದ, ಮಹೇಶ ಕೊಂಡೋಜಿ, ರಾಜೀವ ದಾನಪ್ಪನವರ, ಗಿರೀಶ ಹಿರೇಮಠ, ಅಜ್ಜನಗೌಡ ಕರೇಗೌಡ್ರ, ರಾಜೇಂದ್ರಪ್ಪ ಗಾಳಪೂಜಿ, ಶಿವನಗೌಡ ಉದ್ದೇಗೌಡ್ರ, ರಮೇಶ ಕಳಸೂರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಎಚ್. ಸಂತೋಷ, ಕಂದಾಯ ಇಲಾಖೆ ಶಿರಸ್ತೇದಾರ ಕೆ.ಟಿ. ಕಾಂಬಳೆ, ತೋಟಗಾರಿಕೆ ಇಲಾಖೆ ಅಧಿಕಾರಿ ಭರಮಪ್ಪ ನೇಗಿನಹಾಳ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.