ಕನ್ನಡಪ್ರಭ ವಾರ್ತೆ ಚಾಮರಾಜನಗರಕಾನೂನು ಬಾಹಿರವಾಗಿ ತಾಲೂಕು ಬಿಸಿಎಂ ಅಧಿಕಾರಿಯಾಗಿರುವ ಹರೀಶ್ ಅವರನ್ನು ಸರ್ಕಾರ ವಾಪಸ್ ಮಂಡ್ಯ ಜಿಲ್ಲೆಗೆ ಎಫ್‌ಡಿಎ ಆಗಿ ಹೋಗುವಂತೆ ಆದೇಶ ಮಾಡಿದ್ದರೂ ಸಹ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮಕೈಗೊಳ್ಳಲು ವಿಫಲವಾಗಿರುವುದನ್ನು ಖಂಡಿಸಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬಸವನಪುರ ರಾಜಶೇಖರ್ ಎಚ್ಚರಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಕೆಲವು ದಿನಗಳ ಹಿಂದೆ ಎಸ್‌ಡಿಎ ಆಗಿರುವ ಹರೀಶ್ ನಿಯಮಗಳನ್ನು ಉಲ್ಲಂಘನೆ ಮಾಡಿ, ರಾಜಕೀಯ ಪ್ರಭಾವ ಬಳಸಿಕೊಂಡು ಜಿಲ್ಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವಿಸ್ತಾರಣಾಧಿಕಾರಿಯಾಗಿ ಬಂದಿದ್ದಾರೆ. ಅಲ್ಲದೇ ಸಹಾಯಕ ನಿರ್ದೇಶಕರಾಗಿ ಮುಂಬಡ್ತಿಯಾಗಿ ಪ್ರಭಾರ ವಹಿಸಿಕೊಂಡಿದ್ದಾರೆ. ಅಧಿಕಾರಿಯಾಗಲು ಸಾಧ್ಯವಿಲ್ಲದ ಹರೀಶ್‌ಗೆ ಸರ್ಕಾರ ಎರಡು ಹುದ್ದೆಗಳನ್ನು ನೀಡಿದೆ ಎಂದು ದೂರಿದರು. ಸಂಘಟನೆಗಳು ಎಚ್ಚೆತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡ ಪರಿಣಾಮ ಅವರನ್ನು 2023ರ ಸೆಪ್ಟೆಂಬರ್ 12ರಲ್ಲಿ ಮರು ಆದೇಶ ಹೊರಡಿಸಿ, ವಾಪಸ್ ಬರುವಂತೆ ರಾಜ್ಯ ಅಧೀನ ಕಾರ್ಯದರ್ಶಿ ಆದೇಶ ನೀಡಿದ್ದಾರೆ. ಆದರೆ, ಇನ್ನು ಕೂಡ ಹರೀಶ್ ಚಾಮರಾಜನಗರ ತಾಲೂಕು ಅಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಪ್ರಭಾರ ಹುದ್ದೆಯಲ್ಲಿ ಕಳೆದ ಐದು ತಿಂಗಳಿಂದ ಮುಂದುವರಿದ್ದಾರೆ. ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದು, ಕೂಡಲೇ ಅವರನ್ನು ಮೂಲ ಹುದ್ದೆಗೆ ಕಳುಹಿಸಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಅರ್ಹರನ್ನು ಖಾಲಿ ಇರುವ ಹುದ್ದೆಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಚಾಮರಾಜನಗರ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ದಲಿತರು, ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂಥ ಜಿಲ್ಲೆಗಳಲ್ಲಿಯೇ ಇಂಥ ಅಕ್ರಮಗಳನ್ನು ಮಾಡಲು ಅಧಿಕಾರಿಗಳು ಹೊರ ಜಿಲ್ಲೆಯಿಂದ ಬರುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು. ಸರ್ಕಾರ ತನ್ನ ತಪ್ಪಿನ ಅರಿವಾಗಿ ಮತ್ತೇ ಅವರನ್ನು ವಾಪಸ್ ಆದೇಶ ಮಾಡಿದೆ. ಆದರೆ, ಈ ಆದೇಶ ಮಾತ್ರ ಪಾಲನೆಯಾಗುತ್ತಿಲ್ಲ. ಇದೇ ರೀತಿ ಮುಂದುವರಿದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ರಾಜಶೇಖರ್ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಪರಶಿವಮೂರ್ತಿ, ಮುಖಂಡರಾದ ಕಸ್ತೂರು ಮರಪ್ಪ, ಜಿ ಎಂ ಶಂಕರ್, ಎಂ ಶಿವಕುಮಾರ್, ವೆಲ್ಡಿಂಗ್ ಲಿಂಗರಾಜು, ಎಂ ರಾಜು ಇದ್ದರು.