- ಆರ್‌ಎಂಸಿ ಯಾರ್ಡ್ ಠಾಣೆಗೆ ದೂರು ನೀಡಿದ್ದರೂ ಸ್ಪಂದಿಸದ ಪೊಲೀಸರು: ಆವರಗೆರೆ ಎಚ್.ಜಿ.ಉಮೇಶ ಆರೋಪ
ಕನ್ನಡಪ್ರಭ ವಾರ್ತೆ ದಾವಣಗೆರೆ
ಆವರಗೆರೆಯಲ್ಲಿ ಮಡಿವಾಳ ಸಮಾಜದ ರುದ್ರಭೂಮಿಯನ್ನು ಅತಿಕ್ರಮಿಸಿ, ಟ್ರ್ಯಾಕ್ಟರ್‌ಗಳಿಂದ ಸಮಾಧಿ ಧ್ವಂಸಗೊಳಿಸಿ, ಸಾಕ್ಷ್ಯ ನಾಶಪಡಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಧಿಗಳನ್ನು ಧ್ವಂಸಗೊಳಿಸಿದ ಬಗ್ಗೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ತನಿಖೆ ನಡೆಸದೇ, ಪೊಲೀಸರು ಅಸಡ್ಡೆ ತೋರುತ್ತಿದ್ದರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪಿಸಿಆರ್ ದಾವೆ ದಾಖಲಿಸಲಾಗುವುದು. ಒಂದುವೇಳೆ ನಮ್ಮ ಜನಾಂಗದ ಯಾರಿಗೇ ಏನೇ ಅನಾಹುತಗಳಾದರೂ ಅದಕ್ಕೆ ಸ್ಮಶಾನ ಅತಿಕ್ರಮಣ ಮಾಡಿರುವ ವ್ಯಕ್ತಿಗಳು, ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಸಿದರು.
ವಕೀಲ ಅಜಯಕುಮಾರ ಮಾತನಾಡಿ, ಕೋರ್ಟ್‌ನಲ್ಲಿ ದಾವೆ ಪೆಂಡಿಂಗ್ ಇರುವುದು ಗೊತ್ತಿದ್ದರೂ ಜೂ.24ರ ಸಂಜೆ 6.30ರ ವೇಳೆಗೆ ಎಂ.ಡಿ. ಹನುಮಂತಪ್ಪನವರ ಮಕ್ಕಳಾದ ನಂದನಕುಮಾರ್, ಚೇತನ್ ಮತ್ತು ಹನುಮಂತಪ್ಪನ ಅಣ್ಣನ ಮಗ ನವೀನಕುಮಾರ, ದಾಕ್ಷಾಯಣಮ್ಮ ಮತ್ತಿತರರು ಸ್ಮಶಾನದ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಕೆಎ 17, ಟಿಸಿ 6017 ನೋಂದಣಿಯ ಟ್ರ್ಯಾಕ್ಟರ್, ಕಲ್ಪಿವೇಟರ್ ಬಳಸಿ, ಸ್ಮಶಾನದಲ್ಲಿದ್ದ ಸಮಾಧಿ ಹಾಗೂ ಗುರುತಿಗೆ ಹಾಕಿದ್ದ ಕಲ್ಲುಗಳನ್ನು ಕಿತ್ತು ಹಾಕಿಸಿದ್ದಾರೆ. ಅಲ್ಲಿದ್ದ ಕಳೆಬರಹ, ಅಸ್ಥಿಗಳನ್ನು ಅಗೆದು, ತೆಗೆದು ಬೇರೆಡೆ ಸಾಗಿಸಿ, ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಇಡೀ ಘಟನೆ, ಕೃತ್ಯವನ್ನು ಸ್ಥಳೀಯರಾದ ಕೆ.ರಂಗನಾಥ, ಮಂಜುನಾಥ ಇತರರು ಪ್ರತ್ಯಕ್ಷ ಕಂಡಿದ್ದಾರೆ ಎಂದರು. ಈ ಘಟನೆ ಬಗ್ಗೆ ಆವರಗೆರೆ ಬಸವ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಕರಿಯಪ್ಪ ಆರ್‌ಎಂಸಿ ಯಾರ್ಡ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ತನಿಖೆ ನಡೆಸದೇ, ಕಾಲಹರಣ ಮಾಡುತ್ತಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸಿ, ಸಮಾಧಿಗಳನ್ನು ಬಗೆದು, ಅಪಚಾರ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ ಎಂದು ಎಚ್ಚರಿಸಿದರು.
- - -
- ಅಜಯಕುಮಾರ, ವಕೀಲ.
-14ಕೆಡಿವಿಜಿ1, 2: