ಅಭಿವೃದ್ಧಿ ಕಾಮಗಾರಿಗಳಿಗೆ ತಡೆವೊಡ್ಡುವವರ ಮೇಲೆ ಕ್ರಮಕೈಗೊಳ್ಳಿ

KannadaprabhaNewsNetwork | Published : Jun 29, 2025 1:32 AM

ಲಕ್ಷ್ಮೇಶ್ವರ ತಾಲೂಕಿನ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ವಿನಾಕಾರಣ ತಡೆ ಮಾಡುತ್ತಿದ್ದಾರೆ. ಅಂತವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ತಾಲೂಕಿನ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ವಿನಾಕಾರಣ ತಡೆ ಮಾಡುತ್ತಿದ್ದಾರೆ. ಅಂತವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಶನಿವಾರ ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದಿಂದ ದೂದಪೀರಾ ದರ್ಗಾದವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿನ ಹಲವು ರಸ್ತೆಗಳು ತುಂಬಾ ಹದಗೆಟ್ಟು ಹೋಗಿವೆ‌. ಇಂತಹ ರಸ್ತೆಗಳನ್ನು ಶೀಘ್ರದಲ್ಲಿ ಸಂಚಾರಕ್ಕೆ ಯೋಗ್ಯ ಮಾಡಿಕೊಡುವುದು ನಮ್ಮ ಮೊದಲ ಗುರಿಯಾಗಿದೆ. ಆದ್ದರಿಂದ ಗುಣ ಮಟ್ಟದ ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಹೆಚ್ಚು ಗಮನ‌ಹರಿಸಬೇಕು. ಸಾರ್ವಜನಿಕರು ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎನ್ನುವ ಬಗ್ಗೆ ಗಮನ‌ ಹರಿಸಿ ಗುಣ ಮಟ್ಟದ ಕೆಲಸ ನಡೆಯುವಂತೆ‌ ನೋಡಿಕೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ವತಿಯಿಂದ ಸುಮಾರು 2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಅಧಿಕಾರಿಗಳು ಕೆಲಸ ಸರಿಯಾಗಿ ನಡೆಯುತ್ತಿದೆ ಎಂಬ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಆಗಾಗ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಹೇಳಿದ ಅವರು ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಕೆಲವರು

ವಿನಾಕಾರಣ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ತಕರಾರು ತೆಗೆದು ಕಾಮಗಾರಿಗಳಿಗೆ ತಡೆ ನೀಡುತ್ತಿದ್ದಾರೆ ಅಧಿಕಾರಿಗಳು ಅಂತವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಈ ವೇಳೆ ಪುರಸಭೆ ಉಪಾಧ್ಯಕ್ಷ ಫಿರ್ದೋಷ ಅಡೂರು, ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಮಿತ ಬಿದರಿ, ಜಯಕ್ಕ ಅಂದಲಗಿ, ಪೂರ್ಣಿಮಾ ಪಾಟೀಲ, ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಕವಿತಾ ಶೆರಸೂರಿ, ಮಂಜಕ್ಕ ಗುಂಜಳ. ಸಾಹೀಬ್ ಜಾನ್ ಹವಾಲ್ದಾರ, ಮಹಾದೇವಪ್ಪ ಅಣ್ಣಿಗೇರಿ, ರಾಮಣ್ಣ ಗಡದವರ, ಎಂ.ಆರ್.ಪಾಟೀಲ, ಬಸವರಾಜ ಚಕ್ರಸಾಲಿ, ಎಂ.ಎಸ್. ಕಣಕೆ, ಜಾಕೀರ್ ಹುಸೇನ್ ಹವಾಲ್ದಾರ್, ಮುಕ್ತಿ ಯಾರ್ ಅಹ್ಮದ್ ಗದಗ, ಸುಲೇಮಾನ್ ಸಾಬ್ ಕಣಿಕೆ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಮಂಜುನಾಥ ಮುದಗಲ್ಲ, ಗುತ್ತಿಗೆದಾರ ಮಾಲತೇಶ ಗೌಳಿ ಇದ್ದರು. ಶಾಸಕರೊಂದಿಗೆ ಮಾತಿನ ಚಕಮಕಿ: ಪಟ್ಟಣದ ದೂದಪೀರಾ ದರ್ಗಾದ ಪಕ್ಕದಲ್ಲಿ ಕಳೆದ ಎರಡು ವರ್ಷಗಳಿಂದ ಮಾಡಿದ ಕಾಮಗಾರಿ ಸರಿಯಾಗಿಲ್ಲ, ಹೀಗಾಗಿ ರಸ್ತೆಯ ಮೇಲೆ ಮೊಣಕಾಲು ವರೆಗೆ ನೀರು ನಿಂತು ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಅಟೋ ಹತ್ತಲು ಜನ ಬರುತ್ತಿಲ್ಲ. ಆದ್ದರಿಂದ ರಸ್ತೆ ನಿರ್ಮಾಣ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳ್ಳುವಂತೆ ಹಾಗೂ ಸರಿಯಾಗಿ ನಡೆಯುವಂತೆ ಅಧಿಕಾರಿಗಳು ಹಾಗೂ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದಾಗ ಅಟೋ ಚಾಲಕರು ಮತ್ತು ಶಾಸಕರೊಂದಿಗೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕರು ಮತ್ತು ಬೆಂಬಲಿಗರು ನಡುವೆ ವಾಗ್ವಾದ ನಡೆದು ಘಟನೆ ಕಂಡು ಬಂದಿತು.