ಕನ್ನಡಪ್ರಭ ವಾರ್ತೆ ಕಲಬುರಗಿ, ಜೇವರ್ಗಿ
ಸಭೆಯಲ್ಲಿ ಜೇವರ್ಗಿ ಪಟ್ಟಣ ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿಗೆ ಸಂಬಂಧಪಟ್ಟಂತಹ 52 ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ರಸಗೊಬ್ಬರ, ಬೀಜ ಕೃತಕ ಅಭಾವದ ವಿರುದ್ಧ ಕ್ರಮ:ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ರೈತರೆಲ್ಲರೂ ಬಿತ್ತನೆಗೆ ಮುಂದಾಗಿದ್ದಾರೆ. ಅನೇಕರು ಅದಾಗಲೇ ಬಿತ್ತಿದ್ದಾರೆ. ಇದೀಗ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಕಾಡಲೇಬಾರದು. ರಸಗೊಬ್ಬರ, ಬೀಜ ಕೃತಕ ಅಭಾವ ಸೃಷ್ಟಿಸುತ್ತಿರುವ ದೂರುಗಳಿದ್ದು, ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗುವಂತೆ ಹಾಗೂ ಇಂತಹ ಮೋಸದ ಆಟಗಳ ಮೇಲೆ ನಿಗಾ ವಹಿಸುವಂತೆ ಡಾ. ಅಜಯ್ ಸಿಂಗ್ ಸಭೆಯಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆಗೆ ಸೂಚಿಸಿದರು.
ಜೇವರ್ಗಿ ಹಾಗೂ ಯಡ್ರಾಮಿಯಲ್ಲಿ ಸೋರುವ ಶಾಲೆಗಳು, ಕೋಣೆಗಳು ಕಂಡು ಬಂದಲ್ಲಿ ತಕ್ಷಣ ಶಿಕ್ಷಕರು, ಮುಖ್ಯ ಗುರುಗಳು ಅಲ್ಲಿರುವ ಅಧಿಕಾರಿಗಳಿಗೆ ಗಮನಕ್ಕೆ ತರಬೇಕು. ಮಕ್ಕಳ ಸುರಕ್ಷತೆ ಮುಖ್ಯವೇ ಹೊರತು ಎಲ್ಲರೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆಯುವಂತೆ ಸೂಚಿಸಿದರು.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮತ್ತೆ 70 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದಾರೆ. ಇದರಿಂದಾಗಿ ಜೇವರ್ಗಿ ತಾಲೂಕಿನಲ್ಲಿ ನದಿ ದಡದಲ್ಲಿ ಬರುವ 40 ಗ್ರಾಮಗಳಲ್ಲಿ ಸಮಸ್ಯೆ ಕಾಡುವ ಆತಂಕವಿದೆ. ತಹಸೀಲ್ದಾರರು ಹಾಗೂ ಕಂದಾಯ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆಯವರೆಲ್ಲರೂ ಸೇರಿಕೊಂಡು ತಂಡ ರಚಿಸಿ ನೆರೆ ಆತಂಕದ ಮೇಲೆ ನಿಗಾ ಇಡಬೇಕು. ಜನರು, ಜಾನುವಾರು ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕರು ಸೂಚಿಸಿದರು.
ತಾಲೂಕಿನ ಹಳ್ಳಿಗಾಡಲ್ಲಿ ಕೈಗೊಳ್ಳುವ ಸಿಸಿ ರಸ್ತೆ ಕಾಮಗಾರಿಗೆ ಅಗತ್ಯ ಮರಳು ದೊರಕಿಸುವ ಬಗ್ಗೆ ಪೊಲೀಸ್, ತಹಸೀಲ್ದಾರ್ ಸಭೆ ನಡೆಸಲಾಗಿದ್ದು, ಕಾಮಗಾರಿಗೆ ಮರಳು ಪೂರೈಸುವ ಸೂಚನೆ ನೀಡಲಾಗಿದೆ. ಮುಂಬರುವ 1 ತಿಂಗಳಲ್ಲಿ 61 ರಸ್ತೆ ಕಾಮಗಾರಿಗಳನ್ನು ಮಾಡಿ ಮುಗಿಸಬೇಕು ಎಂದು ಅಧಿಕಾರಗಳಿಗೆ ತಾಕೀತು ಮಾಡಿದರು.