ನೋಂದಾಯಿಸದ ನಕಲಿ ವೈದ್ಯ, ಆಸ್ಪತ್ರೆ ವಿರುದ್ಧ ಕ್ರಮವಹಿಸಿ

KannadaprabhaNewsNetwork |  
Published : Jul 25, 2026, 01:30 AM IST
 | Kannada Prabha

ಸಾರಾಂಶ

Take action against unregistered fake doctor, hospital

-ಕೆಪಿಎಂಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪೂವಿತಾ ಸೂಚನೆ

----

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ಕೆಪಿಎಮ್‌ಇ ಕಾಯ್ದೆಯಡಿ ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆಗಳು ಮತ್ತು ವ್ಯಸನ ಮುಕ್ತಿ ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪೂವಿತಾ ಎಸ್. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಕೆಪಿಎಮ್‌ಇ ಕಾಯ್ದೆ ಅನುಷ್ಠಾನ ಹಾಗೂ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರವಾನಗಿ ಇಲ್ಲದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈದ್ಯರಲ್ಲದವರು ಅನಧಿಕೃತವಾಗಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ನಕಲಿ ವೈದ್ಯರ ಮಾಹಿತಿ ಪಡೆಯಬೇಕು. ವೈದ್ಯ ಪದವಿ ಪಡೆಯದೆ ಜನರ ಜೀವಕ್ಕೆ ತೊಂದರೆಯುಂಟು ಮಾಡುವುದನ್ನು ತಡೆಯಲು ಎಲ್ಲ ನಕಲಿ ವೈದ್ಯರನ್ನು ಗುರ್ತಿಸಿ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕವಾಗಿ ಹಾಗೂ ಕೆಪಿಎಮ್‌ಇ ಕಾಯ್ದೆ-2007ರ ಅಡಿ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮೆಡಿಕಲ್ ಅಂಗಡಿಗಳ ಮಾಲಿಕರು ಕೆಪಿಎಮ್‌ಇ ಅಡಿ ಅನುಮತಿ ಪಡೆಯದೆ ಕ್ಲಿನಿಕ್‌ಗಳನ್ನು ತಮ್ಮ ಅಂಗಡಿಯ ಒಳಭಾಗ, ಪಕ್ಕದಲ್ಲಿ ತೆರೆದಿರುವುದನ್ನು ಪರಿಶೀಲಿಸಿ, ಒಂದು ವೇಳೆ ಚಿಕಿತ್ಸೆ ನೀಡುವ ವೈದ್ಯರ ಹೆಸರಿನಲ್ಲಿ ಕ್ಲಿನಿಕ್ ಇರದಿದ್ದಲ್ಲಿ ಮೆಡಿಕಲ್ ಅಂಗಡಿಗಳ ವಿರುದ್ದ ಕ್ರಮ ಜರುಗಿಸಲು ಸಹಾಯಕ ಔಷಧ ನಿಯಂತ್ರಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಯಾವುದೇ ವೈದ್ಯಕೀಯ ಪದವಿ ಪಡೆದು ಆಸ್ಪತ್ರೆ ಆರಂಭಿಸುವ ಮೊದಲು ಕೆಪಿಎಮ್‌ಇ ಕಾಯ್ದೆ-2007ರಡಿ ಖಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಅನುಮತಿ ಪಡೆದ ನಂತರವೇ ಕ್ಲಿನಿಕ್, ಆಸ್ಪತ್ರೆ ಆರಂಭಿಸಬೇಕು. ಹಾಗೆಯೇ ಒಮ್ಮೆ ನೋಂದಣಿ ಮಾಡಿಸಿದ ನಂತರ 05 ವರ್ಷಗಳವರೆಗೆ ಆಸ್ಪತ್ರೆ ನಡೆಸಲು ಆನುಮತಿ ಇದ್ದು, ನೋಂದಣಿ ಅವಧಿ ಮುಗಿಯಲು ಇನ್ನೂ 03 ತಿಂಗಳು ಇರುವಾಗಲೇ ಪುನಃ ನೊಂದಣಿ ಮಾಡಿಸಲು ಸಂಬಂಧಿಸಿದ ಇಲಾಖೆಯ ಅಗತ್ಯ ಕ್ರಮವಹಿಸ ಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಅಲೋಪತಿ ವಿದ್ಯಾರ್ಹತೆ ಹೊಂದಿದವರು ಅಲೋಪತಿ ಚಿಕಿತ್ಸಾ ಪದ್ದತಿ ಹಾಗೂ ಆಯುರ್ವೇದ ವೈದ್ಯಕೀಯ ಪದವಿ ಪಡೆದವರು ಆಯುಷ್ಯ ಪದ್ದತಿಯಲ್ಲಿ ಚಿಕಿತ್ಸೆ ಮಾತ್ರ ನೀಡಬೇಕು. ಒಂದು ವೇಳೆ ನಿಯಮ ಮೀರಿ ಬೇರೆ ವೈದ್ಯ ವೃತ್ತಿ ಮಾಡುತ್ತಿದ್ದರೆ ಕೆಪಿಎಮ್‌ಇ ಕಾಯ್ದೆ - 2007ರಡಿ ಕ್ರಮ ಜರುಗಿಸಲಾಗುವುದು. ಅಲ್ಲದೆ ಅಂತಹವರು ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಪ್ರಯೋಗಾಲಯಗಳ ವರದಿಯನ್ನು ಪೇಥಾಲಜಿಸ್ಟ್ ಅಥವಾ ಆಸ್ಪತ್ರೆಯ ಮುಖ್ಯ ವೈದ್ಯರ ಮೂಲಕ ಕಡ್ಡಾಯವಾಗಿ ದೃಢಪಡಿಸಿರಬೇಕು. ಜಿಲ್ಲೆಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರಕ್ತ ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳು, ಡಯಾಗ್ನೊಸ್ಟಿಕ್ಸ್ ಕೇಂದ್ರಗಳು ಕಡ್ಡಾಯವಾಗಿ ಕೆಪಿಎಮ್‌ಇ ಕಾಯ್ದೆಯಡಿ ನೋಂದಣಿ ಮಾಡಿಸಬೇಕು. ಮತ್ತು ಪ್ರಯೋಗಾಲಯದ ಪ್ರತಿ ವರದಿಗೂ ಪೇಥಾಲಜಿಸ್ಟ್ ಅವರ ದೃಢಿಕರಣವಾಗಿರಬೇಕು. ಮತ್ತು ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳಲ್ಲಿ ರಕ್ತ ಪರೀಕ್ಷಾ ಕೇಂದ್ರಗಳು, ಪ್ರಯೋಗಾಲಯಗಳು, ಡಯಾಗ್ನೊಸ್ಟಿಕ್ಸ್ ಕೇಂದ್ರಗಳು ಇದ್ದಲ್ಲಿ ಪ್ರಯೋಗಾಲಯದ ಪ್ರತಿ ವರದಿಗೂ ಆಸ್ಪತ್ರೆಯ ಮುಖ್ಯ ವೈದ್ಯರು ದೃಢೀಕರಣ ಮಾಡಿರಬೇಕು. ಒಂದು ವೇಳೆ ನಿಯಮ ಮೀರಿದರೆ ಅಂತವರ ವಿರುದ್ಧ ಕೆಪಿಎಮ್‌ಇ ಕಾಯ್ದೆಯಡಿ ನಿಯಮಾನಯಸಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ವೈದ್ಯರಿಂದ ಚೀಟಿ ತಂದರೆ ಮಾತ್ರ ಔಷಧಿ ವಿತರಿಸಿ: ಔಷಧಿಗಾಗಿ ಸಾರ್ವಜನಿಕರು ವೈದ್ಯರಿಂದ ಚೀಟಿ ತಂದರೆ ಮಾತ್ರ ಔಷಧಿ ವಿತರಿಸಬೇಕು. ಅದರಲ್ಲೂ ಗರ್ಭಪಾತ ಸಂಭAದಿತ ಔಷದಿಗಳನ್ನು ಕೊಟ್ಟಿರುವುದು ಪರಿಶೀಲನೆ ವೇಳೆ ನಿಯಮ ಮೀರಿದ್ದು, ಕಂಡು ಬಂದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವೈದ್ಯ ವೃತ್ತಿಯನ್ನು ಗೌರವದಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ 20 ನಕಲಿ ವೈದ್ಯರ ವಿರುದ್ಧ ಕ್ರಮ: ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳ ವಿರುದ್ಧ ಗರಿಷ್ಠ ಪ್ರಮಾಣದ ದಂಡ ವಿಧಿಸಿ. ಕ್ಲಿನಿಕ್‌ಗಳನ್ನು ಮುಚ್ಚುವ ಜೊತೆಗೆ ಅಂತಹ ತಪ್ಪು ಮುಂದುವರಿಸುವವರ ವಿರುದ್ಧ ಪ್ರಕರಣ ದಾಖಲಿsಸಲಾಗುವುದು. ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಲ್ಲಿ 20ಮಂದಿ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಂಡು, ಅವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 2 ಲಕ್ಷದ 20 ಸಾವಿರ ದಂಡ ವಸೂಲು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಸಭೆಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಶಿವಕುಮಾರ್ ನಾರಾ, ಸಹಾಯಕ ಔಷಧಿ ನಿಯಂತ್ರಕರು ಸಚಿನ್, ಜಿಲ್ಲಾ ಅಯುಷ್ ಅಧಿಕಾರಿ ಡಾ.ಶಂಕರಗೌಡ, ಐಎಮ್‌ಎ ಅಧ್ಯಕ್ಷರಾದ ಡಾ.ಶೈಲೇಶ್ ಅಮರಕೇಡ್, ಡಿಎಸ್‌ಓ ಡಾ.ಗಣೇಶ್ ಕೆ., ಡಿಟಿಓ ಡಾ.ಯಶೋಧಾ, ಡಿಎಮ್‌ಓ ಡಾ.ಚಂದ್ರಶೇಖರಯ್ಯ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಾ ಆರೋಗ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ