ಸುಗಮವಾಗಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ: ಡಿಸಿ

KannadaprabhaNewsNetwork | Published : Mar 31, 2024 2:07 AM

ಸಾರಾಂಶ

ಪ್ರಥಮ ಆದ್ಯತೆಯ ಮೇರೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರಪ್ರಥಮ ಆದ್ಯತೆಯ ಮೇರೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಆಸಕ್ತಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಸರಬರಾಜು ಕಾರ್ಯದಲ್ಲಿ ಪೈಪ್ ಲೈನ್, ಯಂತ್ರಗಳ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳು ಇದ್ದರೆ, ತಕ್ಷಣವೇ ದುರಸ್ತಿಗೊಳಿಸಬೇಕು. ನೀರು ಸರಬರಾಜು ಸುಗಮವಾಗಿ ಸಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕುಡಿಯುವ ನೀರು ಸರಬರಾಜು ಪ್ರಕ್ರಿಯೆಗೆ ಈ ಹಿಂದೆ ಸ್ಥಾಪಿಸಿದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ಚುನಾವಣೆ ಕಾರ್ಯಗಳ ಜೊತೆಗೆ ಕುಡಿಯುವ ನೀರಿನ ಸರಬರಾಜು ಕಾರ್ಯದ ಮೇಲುಸ್ತುವಾರಿ ನಿರ್ವಹಿಸಲು ನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು. ಸಾಧ್ಯವಾದಷ್ಟು ೭ ದಿನಗಳಿಗಿಂತಲೂ ಕಡಿಮೆ ಅವಧಿಗೆ ನಗರಕ್ಕೆ ಕುಡಿಯುವ ನೀರು ಸರಬರಾಜು ಕಾರ್ಯವನ್ನು ಮಾಡಬೇಕು. ಕುಡಿಯುವ ನೀರು ಪೂರೈಕೆಯ ಕಾರ್ಯದಲ್ಲಿ ವಿದ್ಯುತ್ ಪೂರೈಕೆ ಸತತವಾಗಿ ಇರುವಂತೆ, ಹಾಗೂ ವಿದ್ಯುತ್ ಕಡಿತಗೊಳಿಸದಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ, ರಸ್ತೆ ಬದಿಯಲ್ಲಿ ಇರುವ ಮರಗಳಿಗೆ ಪಾಲಿಕೆ ವತಿಯಿಂದ ದಿನಾಲೂ ನೀರು ಉಣಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ನಗರದಾದ್ಯಂತ ಕುಡಿಯುವ ನೀರು ಪೂರೈಸುವ ಕಾರ್ಯದ ಪ್ರತಿದಿನದ ವೇಳಾಪಟ್ಟಿಯನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ, ಪತ್ರಿಕಾ ಪ್ರಕಟಣೆ ಹೊರಡಿಸಲು ಕ್ರಮ ವಹಿಸಬೇಕು ಎಂದರು. ಸಭೆಯಲ್ಲಿ ವಿಜಯಪುರ ನಗರಸಭೆ ಪೌರಾಯುಕ್ತ, ಹೆಸ್ಕಾಂ ನ ಅಧೀಕ್ಷಕ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಜಲಮಂಡಳಿ ಅಧಿಕಾರಿ ಸೇರಿದಂತೆ ಇತರರು ಇದ್ದರು.

Share this article