ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯತೆ ಪೂರೈಸಲು ಗೃಹ ಸಚಿವರಲ್ಲಿ ಚರ್ಚೆ
ಕನ್ನಡಪ್ರಭ ವಾರ್ತೆ ದಾವಣಗೆರೆಕಾನೂನುಬಾಹಿರ ಚಟುವಟಿಕೆ ತಡೆಗೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೈಟೆಕ್ ಕ್ಯಾಮೆರಾ ಅಳವಡಿಸಲು ಅಗಚ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ರಿಗೆ ಸೂಚನೆ ನೀಡಿದರು.
ನಗರದ ತಮ್ಮ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಪಾತ್ರರಾದ ಅಧಿಕಾರಿ, ಸಿಬ್ಬಂದಿಗೆ ಅಭಿನಂದಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸಲು ಅಗತ್ಯ ಕ್ರಮ ಕೈಗೊಳ್ಳಿ, ಇಲಾಖೆಗೆ ಅಗತ್ಯ ವ್ಯವಸ್ಥೆ ಕುರಿತಂತೆ ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.ಇಡೀ ದೇಶದ ಗಮನ ಸೆಳೆದಿದ್ದ ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಐದು ತಿಂಗಳಲ್ಲೇ ಭೇದಿಸುವ ಮೂಲಕ ಪೊಲೀಸ್ ಇಲಾಖೆ ಮೇಲೆ ಜನರ ನಂಬಿಕೆ ಮತ್ತಷ್ಟು ಗಟ್ಟಿಯಾಗುವಂತಹ ಕೆಲಸವನ್ನು ನೀವೆಲ್ಲಾ ಮಾಡಿದ್ದೀರಿ. 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೂ ಪಾತ್ರರಾಗಿದ್ದು, ನಿಮ್ಮೆಲ್ಲಾ ಅಧಿಕಾರಿ, ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದರು.
ಹಿಂದೆ ಸುನಿಲ್ ಅಗರವಾಲ್ ಎಸ್ಪಿ ಆಗಿದ್ದಾಗ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆ ಸುಗಮವಾಗಿ ನಡೆಸಲು ಕಾರಣರಾಗಿದ್ದರು. ಹಾಗಾಗಿ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣ ಸಹ ಕಡಿಮೆಯಾಗಿದ್ದವು. ಅದೇ ರೀತಿ ಇನ್ನೂ ಪರಿಣಾಮಕಾರಿಯಾಗಿ ನೀವೆಲ್ಲರೂ ಕೆಲಸ ಮಾಡಬೇಕು. ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿ, ಕದ್ದಿದ್ದ ಸ್ವತ್ತನ್ನು ಜಪ್ತಿ ಮಾಡಿದ ನಿಮ್ಮೆಲ್ಲರ ಬದ್ಧತೆ ಎಲ್ಲೆಡೆ ಮನೆ ಮಾತಾಗಿದೆ ಎಂದು ಶ್ಲಾಘಿಸಿದರು.ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರತಿ ರಸ್ತೆಗಳು, ಆಯಕಟ್ಟಿನ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ, ಶ್ರೇಷ್ಟ ದರ್ಜೆಯ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಆಗಬೇಕು. ಕಳವು ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ವಾಹನಗಳು ಎಷ್ಟು ವೇಗದಲ್ಲಿ ಚಲಿಸುತ್ತವೋ ಅದಕ್ಕಿಂತ ವೇಗದಲ್ಲಿ ಅಂತಹ ವಾಹನಗಳ ನಂಬರ್ ಸೆರೆ ಹಿಡಿಯುವ, ಅಸ್ಪಷ್ಟ ಚಿತ್ರಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿಯುವಂತಹ ಕ್ಯಾಮೆರಾ ಅಳವಡಿಸುವ ಕೆಲಸ ಆಗಬೇಕು ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಮತ್ತೊಂದು ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲು ಸ್ಥಳ ನಿಗದಿಪಡಿಸಲಾಗುವುದು. ಅಲ್ಲದೇ, ಜಿಲ್ಲೆಯ ಪೊಲೀಸ್ ಠಾಣೆಗಳ ಸುಧಾರಣೆ, ಹೆಚ್ಚುವರಿ ಪೊಲೀಸ್ ವಾಹನಗಳ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ನೀಡಿದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಜೊತೆಗೆ ಚರ್ಚಿಸಿ, ಅವುಗಳನ್ನು ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಸ್ಯಾಮ್ ವರ್ಗೀಸ್, ಗ್ರಾಮಾಂತರ ಡಿವೈಎಸ್ಪಿ ಹಿ.ಎಸ್.ಬಸವರಾಜ, ಡಿಎಆರ್ ಡಿವೈಎಸ್ಪಿ ಪಿ.ಬಿ ಪ್ರಕಾಶ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮುದೇಗೌಡ್ರು ಗಿರೀಶ್, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಬೂದಾಳ ಬಾಬು, ಜಿಲ್ಲಾ ಪೊಲೀಸ್ ಘಟಕದಿಂದ 2024ನೇ ಸಾಲಿನ ಮುಖ್ಯಮಂತ್ರಿಯ ಪೊಲೀಸ್ ಪದಕಕ್ಕೆ ಭಾಜನರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.