ಕೊಟ್ಟೂರು: ತಾಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ರೈತರ ಜಾನುವಾರುಗಳಿಗೆ ಬರಗಾಲದುದ್ದಕ್ಕೂ ಮೇವಿನ ಅಭಾವ ಉಂಟಾಗದಂತೆ ಗಮನ ಹರಿಸಬೇಕು. ಕುಡಿಯುವ ನೀರಿನ ತೊಂದರೆ ಕಂಡುಬರದಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ ಬರಗಾಲವನ್ನು ಸಮರ್ಥವಾಗಿ ಎದುರಿಸಬೇಕು ಎಂದು ಶಾಸಕ ಕೆ. ನೇಮರಾಜ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲೂಕು ಕಾರ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಟ್ಟೂರು ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಜಾನುವಾರುಗಳಿಗೆ ಮುಂದಿನ 20 ವಾರಗಳ ಕಾಲ ಮೇವು ಪೂರೈಸಲು ಈಗಾಗಲೇ ಪಶುಸಂಗೋಪನಾ ಇಲಾಖೆ ಮತ್ತು ತಾಲೂಕು ಆಡಳಿತದ ಸಹಕಾರದೊಂದಿಗೆ ಕ್ರಮ ಕೈಗೊಂಡಿದ್ದೇವೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೊಟ್ರೇಶ್ ವಿವರಿಸಿದರು. ಅಲ್ಲದೆ ತಾಲೂಕಿನ ಹರಾಳು, ಗಜಾಪುರ, ಉಜ್ಜಯಿನಿಯಲ್ಲಿ ಮೂವರು ರೈತರು ತಾವು ಹೆಚ್ಚುವರಿಯಾಗಿ ಬೆಳೆದಿರುವ ಮೇವನ್ನು ಆಡಳಿತಕ್ಕೆ ಮಾರಲು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಮೇವಿವ ಬೀಜಗಳನ್ನು ನೀರಾವರಿ ಭೂಮಿ ಇರುವ ರೈತರಿಗೆ ನೀಡಿದ್ದೇವೆ. ಇದರಿಂದ ಬೆಳೆಯುವ ಮೇವನ್ನು ಸಹ ಪಡೆಯಲು ಈಗಾಗಲೇ ತಯಾರಿ ಮಾಡಿಕೊಂಡಿದ್ದೇವೆ ಎಂದು ಡಾ. ಕೊಟ್ರೇಶ ತಿಳಿಸಿದರು.
ಶಾಸಕ ಕೆ. ನೇಮರಾಜ ನಾಯ್ಕಅವರು, ಮೇವಿನ ಜತೆಗೆ ಕುಡಿಯುವ ನೀರಿನ ತೊಂದರೆ ಕಂಡುಬರದಂತೆ ಆಯಾ ಪಿಡಿಒಗಳು ತಯಾರಿ ಕೈಗೊಳ್ಳಬೇಕು. ಕುಡಿಯುವ ನೀರಿನ ಪೂರೈಕೆಗೆ ವಿದ್ಯುತ್ ತೊಂದರೆ ಉಂಟಾಗದಂತೆ ಅಧಿಕಾರಿಗಳೊಂದಿಗೆ ಜೆಸ್ಕಾಂನವರು ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ಸೂಚಿಸಿದರು.ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋದರೆ 24 ಗಂಟೆಯೋಳಗೆ ಮತ್ತೊಂದು ಟ್ರಾನ್ಸ್‌ಫಾರ್ಮರ್‌ನ್ನು ರೈತರ ಬೇಡಿಕೆ ಅನುಗುಣವಾಗಿ ಕೊಡಲೇಬೇಕು ಎಂದು ಜೆಸ್ಕಾಂ ಸಹಾಯಕ ಎಂಜಿನಿಯರ್ ಚೇತನ್ ಅವರಿಗೆ ಶಾಸಕರು ತಾಕೀತು ಮಾಡಿದರು.
ರಾಜ್ಯಕ್ಕೆ ಕೇಂದ್ರದಿಂದ ಬರ ಪರಿಹಾರ ನಿಧಿ ಇಷ್ಟರಲ್ಲಿಯೇ ಬರಲಿದ್ದು, ಇದನ್ನು ತಾಲೂಕಿಗೆ ಈ ಬರ ಪರಿಹಾರದಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಯಾವುದೇ ತೊಂದರೆಯಾಗದಂತೆ ತಡಮಾಡದೇ ವಿತರಿಸಲು ಕೃಷಿ ಮತ್ತಿತರ ಅಧಿಕಾರಿಗಳು ಗಮನ ಹರಿಸಬೇಕು ಎಂದರು.ಜೆಜೆಎಂ ಯೋಜನೆಯಡಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚುವರಿಯಾಗಿ ಠೇವಣಿಯಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ಅನ್ಯ ಕಾಮಗಾರಿಗಳಿಗೆ ಬಳಸದೆ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಮಾತ್ರ ಬಳಸಿಕೊಂಡು ಯಾವುದೇ ಹಂತದಲ್ಲಿ ಕುಡಿಯುವ ನೀರು ಯೋಜನೆಯ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಪ್ರಸಕ್ತ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಟ್ಟೂರು ತಾಲೂಕು ವಿದ್ಯಾರ್ಥಿಗಳು ನೂರರ ಪ್ರಮಾಣದಲ್ಲಿ ತೇರ್ಗಡೆಯಾಗುವುದರ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರ ಮೂಲಕ ಗಮನಹರಿಸಬೇಕು ಎಂದರು.ತಾಲೂಕಿನಲ್ಲಿನ ಅತಿಥಿ ಶಿಕ್ಷಕರಿಗೆ ವೇತನ ನೀಡಲು ಸೂಕ್ತ ಬಗೆಯ ಪೂರ್ವ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಬಿಇಒ ಪದ್ಮನಾಭ ಕರ್ಣಂ ಅವರಿಗೆ ಶಾಸಕರು ಸೂಚಿಸಿದರು.
ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಶರಣಪ್ಪ ಮುದುಗಲ್, ತಹಸೀಲ್ದಾರ್ ಅಮರೇಶ ಜಿ.ಕೆ., ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ್ ಇದ್ದರು. ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವಿಜಯಕುಮಾರ್ ಸಹಾಯ ಕೃಷಿ ನಿರ್ದೇಸಕ ಸುನಿಲ್ ಕುಮಾರ್, ಸಮಾಜಕಲ್ಯಾಣ ಇಲಾಖೆ ಜಗದೀಶ ದಿಡುಗೂರು, ತಾಲೂಕು ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್, ಕುಡಿಯುವ ನೀರು ಯೋಜನೆಯ ಅಧಿಕಾರಿ ನರೇಶ್ ಇತರರು ಇದ್ದರು.