ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ಆಳ್ವಾಸ್ ವಿರಾಸತ್ ೨೯ನೇ ಅಧ್ಯಾಯದ ಮೂರನೇ ದಿನವಾದ ಶನಿವಾರ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಸಂಗೀತ ಪ್ರೇಮಿಗಳನ್ನು ಸಂಗೀತ ಸಾಗರದಲ್ಲಿ ತೇಲಾಡಿಸಿ ಮೈಮರೆಯುವಂತೆ ಮಾಡಿದರು. ವಿರಾಸತ್ ಎನ್ನುವ ಕ್ಯಾನ್ವಸ್‌ನಲ್ಲಿ ತನ್ನ ಮಧುರ ಕಂಠದಿಂದ ಒಂದಕ್ಕಿಂತ ಮತ್ತೊಂದು ಮಧುರ, ಸುಮಧುರ ಗೀತೆಗಳನ್ನು ಹಾಡಿ ಗಾನ ಚಿತ್ತಾರ ಮೂಡಿಸಿದರು.ಮುಸ್ಸಂಜೆ ರಂಗೇರುತ್ತಿದ್ದಂತೆ ಶ್ರೇಯಾ, ಶ್ರೇಯಾ, ಶ್ರೇಯಾ. ಎನ್ನುವ ಅಭಿಮಾನಿಗಳ ಭೋರ್ಗರೆಯುವ ಉದ್ಘೋಷದ ನಡುವೆ ಪಶ್ಚಿಮ ಬಂಗಾಳದ ಬೆಹರಾಂಪುರದ ಹಾಲುಗೆನ್ನೆಯ ಹುಡುಗಿ ಶ್ರೇಯಾ ಘೋಷಾಲ್ ‘ಎಲ್ಲರಿಗೂ ನಮಸ್ಕಾರ ಮೂಡುಬಿದಿರೆ...’ ಎನ್ನುತ್ತಲೇ... ‘ಯಾರಾ ಮುಜುಕೋ ಇರಾದೆ ದೇ... ಸುನ್ ರಹಾ ಹೇ ನಾ ತೂ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಆರಂಭ ನೀಡಿದರು. ಅದಾಗಲೇ ತುಂಬಿ ತುಳುಕಿದ್ದ ಸಹಸ್ರಾರು ಸಂಗೀತ ಪ್ರೇಮಿಗಳ ಸಡಗರದ ಅಲೆ ಉಕ್ಕಿ ಬಂದ ಸಾಗರದಂತೆ ಸಭಾಂಗಣವೇ ರಂಗೇರಿತು. ಎಲ್ಲ ದಿಕ್ಕಿನಲ್ಲೂ ‘ಸುನ್ ರಹಾ ಹೇ ನೇ ತೂ’ ಎಂಬ ಪ್ರತಿಧ್ವನಿ.
‘ಓ ಮೈ ಗಾಡ್ ಐ ಕಾನ್ ನಾಟ್ ಬಿಲಿವ್ ಇಟ್’, ಆಳ್ವಾಸ್ ವಿರಾಸತ್ ನನ್ನ ಜೀವನದ ಶ್ರೇಷ್ಠ ಸಂಗೀತ ಕಾರ್ಯಕ್ರಮ. ವಿರಾಸತ್ ಕೇಳಿದ್ದೆ. ಆದರೆ, ನಾನು ಅದರ ಭಾಗವಾಗಿರುವುದು ಹೆಮ್ಮೆ ಹಾಗಾಗಿ ನಾನು ಹೃದಯದಿಂದ ಹಾಡುವೆ ಎಂದು ಧನ್ಯತೆ ವ್ಯಕ್ತ ಪಡಿಸಿದರು.ಗುಲಾಬಿ ವರ್ಣದ ಸಲ್ವಾರ್ (ಸೂಟ್) ಧರಿಸಿದ್ದ ಶ್ರೇಯಾ.. ‘ಬಹಾರಾ ಬಹಾರಾ...’ ಹಾಡಿದಾಗ ಎಲ್ಲೆಡೆ ಸ್ಪಂದನದ ನಿನಾದ. ಇದು ‘ಎಡ’ ಮತ್ತು ‘ಬಲ’ದ ಸ್ಪರ್ಧೆ. ಸಭಾಂಗಣದ ಯಾವ ಭಾಗದವರು ಹೆಚ್ಚು ಜೋಶ್ ನಲ್ಲಿ ಇರುತ್ತಾರೆ ಎಂದು ನೋಡಬೇಕು ಎಂದರು. ನಾನು ನಿಜವಾಗಿ ‘ಆಳ್ವಾಸ್’ಗೆ ಫಿದಾ ಆಗಿದ್ದೇನೆ ಎಂದರು ಶ್ರೇಯಾ.
‘ನನಗೆ ಇಂದು ಹೆಚ್ಚು ಶಕ್ತಿ ಬಂದಿದೆ’ ಎಂದ ಅವರು ಕನ್ನಡದ ‘ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ನಿನ್ನ ಹಾಗೆ ಬೇರೆ ಇಲ್ಲವೇ..’ ಹಾಡಿದರು. ‘ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ...’ ಉಲಿದಾಗ ಆಗಸದಲ್ಲಿನ ಅರ್ಧ ಚಂದ್ರನೂ ಗುಲಾಬಿ ಧಿರಿಸಿನ ಬೆಡಗಿಯ ರಾಗಕ್ಕೆ ಬೆಳದಿಂಗಳು ಸೂಸಿದ. ‘ಕನ್ನಡದ ಹಾಡುಗಳನ್ನು ಹಾಡಿ ನಾನು ಕೃತಜ್ಞಳಾಗಿದ್ದೇನೆ’ ಎನ್ನುತ್ತಲೇ, ಬಾಜಿರಾವ್ ಮಸ್ತಾನಿ ಸಿನಿಮಾದ ‘ಮಸ್ತಾನಿ ಹೋಗಯೀ..’ ಹಾಡಿದರು. ಅವರಿಗೆ ಕಿಂಜಲ್ ಚಟರ್ಜಿ ಯುಗಳ ಗೀತೆಯ ಮೂಲಕ ಸಾಥ್ ನೀಡಿದರು.ಪ್ರೇಕ್ಷಕರು ತಮ್ಮ ಮೊಬೈಲ್ ಲೈಟ್ ಆನ್ ಮಾಡಿ ಮೇಲೆ ಬೀಸಿದಾಗ ಸಭಾಂಗಣದಲ್ಲಿ ನಕ್ಷತ್ರ ಲೋಕವೇ ಸೃಷ್ಟಿಯಾಯಿತು. ‘ತಾರೇ ಜಮೀನ್ ಪೇ ಹೇ’ ಎಂದ ಶ್ರೇಯಾ ಅವರು ‘ತೇರಿ ಓರ್...’ ಡುಯೆಟ್ ಹಾಡಿದರು. ‘ಕಿಸೀಕಾ...’ ಎಂದು ವಿದ್ಯಾರ್ಥಿಗಳು ಪ್ರತಿ ಅಲೆ ಹೊಮ್ಮಿಸಿದರು. ‘ಇಟ್ಸ್ ಇನ್ ಕ್ರೆಡಿಬಲ್’ ಎಂದ ಅವರು, ‘ಈಗ ಕ್ರಶ್ ಹಾಡು’ ಎಂದು, ‘ಧೀರೇ ಧೀರೆ...’ ಗಾನ ಸುಧೆ ಹರಿಸಿದರು.
‘ಕೊನೆಯಿಲ್ಲದ ಸಭಾಂಗಣ ಇದೇ ಪರಿಶುದ್ಧ ಪ್ರೀತಿ. ಸಂಸ್ಥೆ ಅಂದರೆ ಹೀಗಿರಬೇಕು. ನನಗೆ ಆಳ್ವಾಸ್ ಬಂದಾಗ ಮನೆಗೆ ಬಂದ ಅನುಭವ ಆಗುತ್ತಿದೆ. ಈ ನೆಲಕ್ಕೂ ನನಗೂ ಏನೋ ಸಂಬಂಧ ಇದೆ’ ಎಂದು, ‘ಕಿಸಿ ಕೇಲಿಯೇ ಕಿಸಿ ಕೋ ಬನಾಯಾ’ ಎಂದು ಬಾಂಧವ್ಯಗಳ ವರ್ಣಿಸುವ ಸಾಹಿತ್ಯ ಹಾಡಿದರು.‘ತನ್ನ ಅನನ್ಯ ಅನುಭವದ ಗೀತೆ, ನಾನು ತಪ್ಪಿದರೆ ನೀವೆ ಸರಿ ಪಡಿಸಿ’ ಎಂದು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ‘ನಿನ್ನ ನೋಡಿ ಸುಮ್ಮನೆ ಹೆಂಗೆ ಇರಲಿ’ ಹಾಡಿದರು.
‘ಆಳ್ವಾಸ್ ವಿರಾಸತ್ ದೇಶದಲ್ಲೇ ಪಾರಂಪರಿಕವಾಗಿ ಅತ್ಯಂತ ಸುಂದರವಾಗಿ ರೂಪಿಸಿದ ಕಾರ್ಯಕ್ರಮ. ನಾನು ದೇಶದ ಬೇರೆಲ್ಲೂ ಕಂಡಿಲ್ಲ’ ಎಂದ ಅವರು, ‘ಘರ್ ಮೋರೇ ಪರ್ ದೇಸಿಯಾ’ ಹಾಡಿದರು.‘ನಿಮ್ಮ ಪ್ರೀತಿಯ ಬೆಚ್ಚಗೆ ನನಗೆ ತಾಕುತ್ತಿದೆ. ಈಗ ಮಳೆಯ ಗಾನ ಬೇಕು’ ಎಂದು ‘ನನ್ನಾರೆ ನನ್ನಾರೆ.... ಬರ್ ಸೋರೇ ಮೇಘಾ ಮೇಘಾ’ ಹಾಡಿದಾಗ ಮಳೆ ಸಿಂಚನದಂತೆ ಪ್ರೇಕ್ಷಕರ ಕರತಾಡನವಾಯಿತು.
ಇಂತಹ ಆಳ್ವಾಸ್ ಕುಟುಂಬ ಕಟ್ಟಿದ ಡಾ.ಮೋಹನ ಆಳ್ವ ಅವರಿಗೆ ಅಭಿನಂದನೆ ಎಂದು ಶ್ರೇಯಾ ಘೋಷಾಲ್ ಕೈ ಮುಗಿದರು.ಬಳಿಕ ಬಂದ ಕಿಂಜಲ್ ಚಟರ್ಜಿ ‘ದಿಲ್ ಚಾಹ್ತಾ ಹೇ’ ಮೂಲಕ ರಂಜಿಸಿದರು. ಗಾಯಕ ಕೆಕೆ ಅವರ ಜನಪ್ರಿಯ ಹಾಡನ್ನು ಹಾಡಿದರು. ಹಾಡಿನಷ್ಟೇ ಕುಣಿದರು, ಕುಣಿಸಿದರು. ಅವರ ಕುಣಿತಕ್ಕೆ ಜೊತೆ ನೀಡಿದ್ದು ಪ್ರಭುದೇವ್ ಹೆಜ್ಜೆ ಹಾಕಿದ’ ‘ಕಾದಲನ್’’ ಸಿನಿಮಾದ.. ‘ಊರ್ವಶಿ, ಊರ್ವಶಿ... ಟೇಕ್ ಇಟ್ ಈಸಿ ಊರ್ವಶಿ...’. ಸಾಲುಗಳು.
‘ಎಂಚ್ ಉಲ್ಲರೂ ಪೂರಾ, ಎಲ್ಲರೂ ಹೇಗಿದ್ದೀರಿ’ ಎಂದು ತುಳು- ಕನ್ನಡದಲ್ಲಿ ಪ್ರಶ್ನಿಸುತ್ತಲೇ ಸಣ್ಣ ವಿರಾಮದ ಬಳಿಕ ವೇದಿಕೆಗೆ ಬಂದ ಶ್ರೇಯಾ ಘೋಷಾಲ್, ೩ ಈಡಿಯೆಟ್ಸ್ ಸಿನಿಮಾದ ‘ಸುಬಿ ಡುಬಿ ಸುಬಿ ಡುಬಿ ಪಂಪಾರಾ...’ ಹಾಡಿದರು.‘ಬಿರುಗಾಳಿ’ ಸಿನಿಮಾದ ‘ಆ ಆ ಆ... ಹೂವಿನ ಬಾಣದಂತೆ ಯಾರಿಗೂ ಕಾಣದಂತೆ..’ ಸಾಲಿಗೆ ಮೋಹಕ ನಾದ ಹೊಮ್ಮಿಸಿದರು.
ಬಳಿಕ ವಿರಹ ವೇದನೆಯ ‘ಅರಳುತಿರು ಜೀವದ ಗೆಳೆಯ..’ ಹಾಡಿದರು. ‘ಕನ್ನಡ ಹಾಡುಗಳೇ ಸುಮಧುರ’ ಎಂದು ಭಾವುಕರಾದರು.ತಕ್ಷಣವೇ ‘ಜಬ್ ವಿ ಮೆಟ್’ ಸಿನಿಮಾದ ‘ಯೇ ಇಷ್ಕ್ ಹಾಯೇ..’ ಗುನುಗು. ಕಪ್ಪು ಕನ್ನಡಕ ಧರಿಸಿ ಕಿಂಜಲ್ ಚಟರ್ಜಿ ಜೊತೆ ’ ಪರಂ ಪರಂ ಪರಮ ಸುಂದರಿ’ ಯುಗಳ ಗೀತೆಯ ನರ್ತನ.
ಹಿಂದಿ, ಕನ್ನಡ ಸೇರಿದಂತೆ ಬಹುಪಾಲು ಎಲ್ಲಾ ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ, ತಮ್ಮ ಮೊದಲ ಚಿತ್ರದ ಹಾಡಿಗೇ ‘ಅತ್ತ್ಯುತ್ತಮ ಗಾಯಕಿ ರಾಷ್ಟ್ರೀಯ ಪುರಸ್ಕಾರ’ ಪಡೆದ ಶ್ರೇಯಾ, ‘ನೀರು ದೋಸ ಖುಷಿ ನೀಡಿತು’ ಎಂದರು.‘ಮುಜೆ ಬೂಲ್ ನಹೀ ಜಾನಾ... ನಾನು ಇಲ್ಲಿಗೆ ಮತ್ತೆ ಮತ್ತೆ ಬರಬೇಕು’... ಎನ್ನುತ್ತಲೇ ತಮ್ಮ ವಿನಮ್ರ ಭಾವದಿಂದ ಸೇರಿದ್ದ ಸುಮಾರು ಲಕ್ಷದಷ್ಟು ಶ್ರೋತೃಳ ಹೃದಯ ಗೆದ್ದರು.
ಇದಕ್ಕೂ ಮೊದಲು ಸಂಜೆಯ ಕಾರ್ಯಕ್ರಮವನ್ನು ಚಿತ್ರನಟಿ ಅಪರ್ಣಾ, ದಿಲೀಪ್ ಶೆಟ್ಟಿ ದೀಪ ಪ್ರಜ್ವಲನದೊಂದಿಗೆ ಚಾಲನೆ ನೀಡಿದರು. ಮೂಡುಬಿದಿರೆ ಜೈನಮಠದ ಭಟ್ಟಾರಕ ಶ್ರೀಗಳವರು ಕೆಲಕಾಲ ಕಾರ್ಯಕ್ರಮದಲ್ಲಿ ಹೊತ್ತು ಕಳೆದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇದ್ದರು.ಮೋಡಿ ಮಾಡಿದ ಶ್ರೇಯಾ ಕಂಠಸಿರಿ!
ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ನಡುವೆ ಒಂದು ಚಿಕ್ಕ ವಿರಾಮ ಪಡೆದು ಹಾಡಿದ ಶ್ರೇಯಾ ರೋಮ್ಯಾಂಟಿಕ್ ಹಾಡುಗಳ ಮೂಲಕ ಶ್ರೋತೃಗಳಲ್ಲಿ ರೋಮಾಂಚನ ಮೂಡಿಸಿದರು. ಸಾಲುತಿಲ್ಲವೇ ಸಾಲುತ್ತಿಲ್ಲವೇ ಎಂದು ನಾಲ್ಕನೇ ಹಾಡಿಗೆ ಕನ್ನಡದ ಹಾಡು ಎತ್ತಿಕೊಂಡ ಶ್ರೇಯಾ ಗಗನವೇ ಬಾಗಿ, ನಿನ್ನ ನೋಡಿ ಸುಮ್ಮನ್ಯಾಂಗರ‍್ಲಿ ಎಂದು ಹಾಡಿದಾಗ ಕಿಕ್ಕಿರಿದ ಪ್ರೇಕ್ಷಕರು ಫಿದಾ ಆಗಿದ್ದರು. ಹೂವಿನಾ ಬಾಣದಂತೆ ಎಂಬ ಮತ್ತೊಂದು ಹೀಗೆ ಒಟ್ಟು ನಾಲ್ಕು ಕನ್ನಡ ಹಾಡುಗಳು ಕಾರ್ಯಕ್ರಮದ ಒಟ್ಟು ೩೩ ಹಾಡುಗಳ ಪೈಕಿ ಗಮನ ಸೆಳೆದವು.ಆವೋ ಪಧಾರೋ ಪಿಯಾ ಹಾಡಿನ ಸಂದರ್ಭ ಜೈಶ್ರೀರಾಮ್ ಘೋಷಣೆಯೂ ಕೇಳಿಬಂತು.
ಕೇಳುಗರನ್ನು ಕುಳಿತಲ್ಲೇ ಕುಣಿಯಿರಿ ಎಂದು ಕಿಚಾಯಿಸಿದ ಶ್ರೇಯಾ ಸುಂದರ ಸಂಜೆಗಾಗಿ ಧನ್ಯವಾದ. ಇದನ್ನು ವರ್ಣಿಸಲು ಶಬ್ದಗಳಿಲ್ಲ. ಹಾರ್ಡ್ ವರ್ಕ್ ಮಾಡಿ ನಿಮ್ಮ ಪ್ರೀತಿಗೆ ಅರ್ಹಳಾಗುವೆ ಎಂದರು. ಕಡಲೇ ಉಕ್ಕಿ ಹರಿದಂತೆ ಸೇರಿದ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಆಳ್ವಾಸ್ ಸ್ವಯಂ ಸೇವಕರು ಹರಸಾಹಸ ಪಡಬೇಕಾಯಿತು.