ಯೂರಿಯಾ ಗೊಬ್ಬರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಿ: ಕೋನರಡ್ಡಿ

KannadaprabhaNewsNetwork |  
Published : Jul 29, 2025, 01:01 AM IST
ಎನ್.ಎಚ್. ಕೋನರೆಡ್ಡಿ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮುಂದಿನ ಒಂದು ವಾರದೊಳಗೆ ರೈತರು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಬೆಳೆಗಳಿಗೆ ನೀಡುತ್ತಾರೆ. ಕಾರಣ ನಿಗದಿತ ಸಮಯದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಪೂರೈಕೆ ಮಾಡಿ.

ಧಾರವಾಡ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಯೂರಿಯಾ ರಸಗೊಬ್ಬರ ಕೊರತೆ ನೀಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಮಾತನಾಡಿ, ಪ್ರಸಕ್ತ ಸಾಲಿನ ಜುಲೈ ತಿಂಗಳ ವರೆಗೆ ಜಿಲ್ಲೆಯ ಯೂರಿಯಾ ರಸಗೊಬ್ಬರದ ಒಟ್ಟು 17223 ಮೆ.ಟನ್ ಬೇಡಿಕೆ ಇದ್ದು, ಇಲ್ಲಿಯ ವರೆಗೆ 23108 ಮೆ.ಟನ್ ಗಳಷ್ಟು ಸರಬರಾಜಾಗಿದೆ. 22,253 ಮೆ.ಟನ್ ಗಳಷ್ಟು ವಿತರಣೆಯಾಗಿದೆ. ಕಳೆದ ಮುಂಗಾರು ಹಂಗಾಮಿಗೆ ಹೋಲಿಸಿದರೆ ಮೆಕ್ಕೆಜೋಳ ಬೆಳೆಯು ಸರಿಸುಮಾರು 13000 ಹೆಕ್ಟೇರ್‌ಗಳಷ್ಟು ಹತ್ತಿ 4100 ಹೆಕ್ಟೇರ್‌ಗಳಷ್ಟು, ಕಬ್ಬು 2100 ಹೆಕ್ಟೇರ್‌ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ ಎಂದರು.

ಜೂನ್ ತಿಂಗಳ ಎರಡನೇ ವಾರದಲ್ಲಿ ಆದ ಹೆಚ್ಚಿನ ಮಳೆಯಿಂದಾಗಿ ಮುಂಚಿತವಾಗಿ ಬಿತ್ತನೆಯಾದ ಕ್ಷೇತ್ರದಲ್ಲಿ ಹಾನಿಯಾದ ಕಾರಣ ಅಂದಾಜು 13000 ಹೆಕ್ಟೇರ್ ಕ್ಷೇತ್ರದಲ್ಲಿ ಮರುಬಿತ್ತನೆ ಆಗಿದ್ದು, ರೈತರು ಪರ್ಯಾಯವಾಗಿ ಮುಸುಕಿನಜೋಳ ಮತ್ತು ಹತ್ತಿ ಬಿತ್ತನೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಮತ್ತು ರೈತರು ವಿವಿಧ ಬೆಳೆಗಳಿಗೆ ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಸುತ್ತಿರುವುದರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇಷ್ಟಾಗಿಯೂ ಹೆಚ್ಚಿನ ಯೂರಿಯಾ ತರಿಸಲು ಇಲಾಖೆ ನಿರಂತರ ಪ್ರಯತ್ನದಲ್ಲಿದ್ದು,ರೈತರಿಗೆ ಕೊರತೆಯಾಗದಂತೆ ಪೂರೈಸಲಾಗುವುದು ಎಂದರು.

ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ಒಂದು ವಾರದೊಳಗೆ ರೈತರು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಬೆಳೆಗಳಿಗೆ ನೀಡುತ್ತಾರೆ. ಕಾರಣ ನಿಗದಿತ ಸಮಯದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಪೂರೈಕೆ ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ರೈತರಿಗೆ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ರಸಗೊಬ್ಬರವನ್ನು ಬಳಸದಂತೆ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿರುವ ನವೀನ ತಾಂತ್ರಿಕತೆಯಾದ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ರೈತರಲ್ಲಿ ಅರಿವು ಮೂಡಿಸಲು ಹೆಚ್ಚಿನ ಪ್ರಚಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಕೃಷಿ ಸಹಾಯಕ ಆಯುಕ್ತ ಶಾಲಮ್ ಹುಸೇನ, ಉಪ ಕೃಷಿ ನಿರ್ದೇಶಕ ಸಂದೀಪ ಹಾಗೂ ಜಯಶ್ರೀ ಹಿರೇಮಠ ಹಾಗೂ ತಾಲೂಕಿನ ತಹಸೀಲ್ದಾರ್‌ರು ಹಾಗೂ ಸಹಾಯಕ ಕೃಷಿ ನಿರ್ದೇಶಕರಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’