ಶಿವಮೊಗ್ಗ: ಪ್ರಸಕ್ತ ಸಾಲಿನ ಮುಂಗಾರು ಆರಂಭಗೊಂಡಿದ್ದು, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅನಾಹುತಗಳಾಗದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಚಿಸಿದರು.
ಹೊಳೆ, ಹಳ್ಳ, ಜಲಪಾತ ಮುಂತಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಕಸ್ಮಿಕ ಅಪಘಾತಗಳು ಹಾಗೂ ಜೀವಹಾನಿ ಆಗಬಹುದಾದ ಸಂಭವವಿದೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ, ನಿರ್ಬಂಧಿತ ಪ್ರದೇಶ, ಪ್ರವೇಶವಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ದಂಡನೆಗೆ ಗುರಿಪಡಿಸಲಾಗುವುದೆಂದು ಆ ಪ್ರದೇಶ ವ್ಯಾಪ್ತಿಯ ಪಿಡಿಒಗಳು ಪ್ರಚಾರ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಬೆಳೆದು ನಿಂತ ದೈತ್ಯ ಮರಗಳ ರೆಂಬೆ-ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಮಳೆಯಿಂದ ಬಾಗಿ ಅಥವಾ ಬಿದ್ದು ವಾಹನ ಅಥವಾ ಜೀವಹಾನಿ ಆಗಬಹುದಾದ ಸಂಭವವಿರುವುದನ್ನು ಗುರುತಿಸಬೇಕು. ಅಲ್ಲದೇ ಶಿಥಿಲವಾಗಿರುವ, ಒಣಗಿರುವ ಹಾಗೂ ದುರ್ಬಲ ಮರಗಳ ತೆರವಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಚಾಚಿಕೊಂಡಿರುವ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.ಶಾಲೆ, ಅಂಗನವಾಡಿಯ ಶಿಥಿಲ ಕಟ್ಟಡಗಳಿದ್ದಲ್ಲಿ ಅಂತಹ ಕೊಠಡಿಗಳನ್ನು ಕೂರಿಸಿ, ತರಗತಿಗಳನ್ನು ನಡೆಸದಂತೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಸಮುದಾಯ ಭವನಗಳಲ್ಲಿ ತರಗತಿಗಳನ್ನು ನಡೆಸಲು ತ್ವರಿತವಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಸೀಲ್ದಾರರು ಸಮನ್ವಯತೆ ಸಾಧಿಸಿ, ಅಂತಹ ಕಟ್ಟಡಗಳಿದ್ದಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಸಣ್ಣ ನೀರಾವರಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಗೊಳಪಡುವ ಕೆರೆ, ಕಟ್ಟೆ-ಕಾಲುವೆಗಳು, ಸೇತುವೆಗಳು ಸುರಕ್ಷಿತವಾಗಿರುವ ಬಗ್ಗೆ ಹಾಗೂ ಮುಂಗಾರು ಮಳೆಯಿಂದ ಯಾವುದೇ ಹಾನಿಗೊಳ್ಳದಿರುವ ಬಗ್ಗೆ ಈಗಲೇ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ದುರ್ಬಲವಾಗಿರುವ ಕೋಡಿ, ಕಾಲುವೆಗಳು, ಸೇತುವೆಗಳು ಇದ್ದಲ್ಲಿ ಅವುಗಳ ಪೂರ್ಣ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ದುರಸ್ತಿಗೆ ಎನ್.ಡಿ.ಆರ್.ಎಫ್ ನಿಧಿಯಲ್ಲಿ 2 ಲಕ್ಷ ರು. ಲಕ್ಷಗಳವರೆಗೆ ಅನುದಾನ ಮಂಜೂರು ಮಾಡಲಾಗುವುದು. ತಗ್ಗು ಪ್ರದೇಶಗಳನ್ನು ಗುರುತಿಸಿ, ಪುನರ್ವಸತಿಗೆ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳುವಂತೆ ಹೇಳಿದರು.
ಅಲ್ಲದೇ ಮಳೆಹಾನಿಯಿಂದಾಗುವ ಅನಾಹುತಗಳಿಗೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳಲು ಸದಾ ಮಾನಸಿಕವಾಗಿ ಸಿದ್ಧರಿರುವಂತೆ ಹಾಗೂ ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ರಾಜಾಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಕಸ-ಕಡ್ಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಚರಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದಾಗಿ ಚರಂಡಿಯಲ್ಲಿ ಮಳೆ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಳ್ಳುವುದರಿಂದ ಹಾಗೂ ಸಾಂಕ್ರಾಮಿಕ ರೋಗಗಳ ಹರಡುವಿಕೆಯಿಂದ ಸುರಕ್ಷತೆ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.