ಹಾಸನ: ಜಿಲ್ಲೆಯಲ್ಲಿ ರಸ್ತೆಯ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯೂನ್ಯತೆಗಳ ಬಗ್ಗೆ ಮುನ್ನೆಚ್ಚರಿಕೆವಹಿಸಿ ಸರಿಪಡಿಸುವ ಮೂಲಕ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವಂತೆ ತಿಳಿಸಿದರು.
ಪಾದಚಾರಿಗಳ ಸ್ಥಳದಲ್ಲಿ ಪಾದಾರ್ಥಗಳನ್ನಿಟ್ಟು ವ್ಯಾಪಾರ ವ್ಯವಹಾರ ನಡೆಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವುದರ ಜೊತೆಗೆ ಅಪಘಾತಗಳು ಸಹ ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ನಗರಸಭೆ ಸಂತೆ ನಡೆಸಲು ಒಂದು ನಿರ್ದಿಷ್ಟವಾದ ಸ್ಥಳ ನಿಗದಿಪಡಿಸಬೇಕು ಎಂದರು. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಿಸಿ ಕ್ಯಾಮರಾಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು. ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ವೇಗ ನಿಯಂತ್ರಿಸಲು ಕ್ರಮ ವಹಿಸುವುದು. ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಬೋರ್ಡ್‌ಗಳು ಇದ್ದಲ್ಲಿ ಅವುಗಳನ್ನು ತೆರವುಗೊಳಿಸುವುದು. ಅಪಘಾತಗಳನ್ನು ನಿಯಂತ್ರಿಸಲು ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ರೇಡಿಯನ್ ಸ್ಟ್ರಿಪ್ ಅಳವಡಿಸಬೇಕು ಎಂದರಲ್ಲದೆ, ನಾಯಿಗಳು ವಾಹನಗಳಿಗೆ ಅಡ್ಡ ಬರುವುದರಿಂದಲೂ ಅಪಘಾತಗಳು ಸಂಭವಿಸುವುದರಿಂದ ನಾಯಿಗಳ ಜನನ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜ್ ಕುಮಾರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.