ಶುದ್ಧ ಕುಡಿಯುವ ಪೂರೈಕೆಗೆ ಕ್ರಮ ವಹಿಸಿ

KannadaprabhaNewsNetwork | Published : Mar 30, 2025 3:05 AM

ಸಾರಾಂಶ

ಜಿಲ್ಲೆಯಲ್ಲಿ ಸಮಸ್ಯೆಗಳು ಎದುರಾಗದಂತೆ ಮುಂಚಿತವಾಗಿ ಕುಡಿಯುವ ನೀರು ಪೂರೈಕೆಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ತಯಾರಿ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಸ್ತುತ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಸಮಸ್ಯೆಗಳು ಎದುರಾಗದಂತೆ ಮುಂಚಿತವಾಗಿ ಕುಡಿಯುವ ನೀರು ಪೂರೈಕೆಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ತಯಾರಿ ಮಾಡಿಕೊಳ್ಳಬೇಕು. ಕಲುಷಿತ ಕುಡಿಯುವ ನೀರು ಸರಬರಾಜು ಆಗದಂತೆ ಕಡ್ಡಾಯವಾಗಿ ನೀರಿನ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳು ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸಲು ಅಗತ್ಯವಿರುವ ಅನುದಾನ ಮೀಸಲಿರಿಸಬೇಕು. ತಾಲೂಕು ಮಟ್ಟದ ಟಾಸ್ಕ್‌ ಪೋರ್ಸ್ ಸಮಿತಿಗಳು ನಿರಂತರ ಸಭೆ ನಡೆಸಿ, ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.

ಅಥಣಿ ಭಾಗದಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಹೆಚ್ಚಿದೆ. ನೀರು ಕಡಿಮೆಯಾಗಿರುವ ಜಲಾಶಯ ಮಟ್ಟವನ್ನು ಪರಿಶೀಲಿಸಿ ಅಗತ್ಯ ಪ್ರದೇಶಗಳಲ್ಲಿ ನೀರು ಬಿಡುಗಡೆ ಕ್ರಮ ವಹಿಸಬೇಕು. ಆಯಾ ತಹಸೀಲ್ದಾರಗಳು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಜವಾಬ್ದಾರಿ ತೆಗೆದುಕೊಳ್ಳಬೇಕು. ಮಹಾನಗರ ಪಾಲಿಕೆಯಿಂದ ನಗರದ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತುರ್ತು ಘಟಕ ಸ್ಥಾಪಿಸಬೇಕು ಎಂದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು, ಬರಗಾಲ ಎಂದು ಘೋಷಣೆಯಾದ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತಾಲೂಕು ಹಂತದಲ್ಲಿ ಟೆಂಡರ್ ಕರೆಯಬೇಕು. ಅಗತ್ಯವಿದ್ದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ನೀರು ಸರಬರಾಜು ಮಾಡಬೇಕು ಎಂದು ಹೇಳಿದರು.

ಜಾನುವಾರುಗಳಿಗೆ ಮೇವು ವಿತರಣೆ:

ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾತನಾಡಿ, ಈ ಬಾರಿ ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಮೇವಿನ ತೊಂದರೆ ಇಲ್ಲ. ಮೇವು ಪೂರೈಕೆಗೆ ಮೇವು ಬ್ಯಾಂಕ್ ಗಳಲ್ಲಿ ಅಗತ್ಯ ಮೇವು ಸಂಗ್ರಹಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳ ಕಾಯಿಲೆ, ರೋಗಗಳು ಕಂಡು ಬಂದಿರುವುದಿಲ್ಲ. ಬರುವ ದಿನಗಳಲ್ಲಿ ಜಾನುವಾರುಗಳ ಮೇವು ಕೊರತೆಯಿಲ್ಲ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಶುಭ. ಬಿ, ಬೆಳಗಾವಿ ತಹಶೀಲ್ದಾರ ಬಸವರಾಜ ನಾಗರಾಳ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಎಲ್ಲ ತಾಲೂಕು ತಹಶೀಲ್ದಾರಗಳು ವಿಡಿಯೋ ಸಂವಾದದಲ್ಲಿ ಹಾಜರಿದ್ದರು.

Share this article