ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕಳೆದ ವರ್ಷ ಮತ್ತು ಪ್ರಸ್ತುತ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಇಳಿಕೆಯಾಗಿರುವುದನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ನಿರ್ಣಯಿಸಿದಂತೆ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಹರಪನಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಫಲಿತಾಂಶ ಸುಧಾರಣೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ಸೂಚನೆ ನೀಡಿದರು.
ಕಲುಷಿತ ನೀರು ಕುಡಿದು ಸಾವಿಗೀಡಾಗುವ ಪ್ರಕರಣಗಳು ದಾಖಲಾಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಜಿಲ್ಲಾದ್ಯಂತ ಎಲ್ಲ ಕಡೆಗೆ ಶುಚಿತ್ವದ ಕಡೆಗೆ ಗಮನ ಕೊಡಬೇಕು. ಜಿಲ್ಲಾಡಳಿತ ಮತ್ತು ಜಿಪಂ ಸಿಇಒಗಳೊಂದಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಎಲ್ಲ ತಹಸೀಲ್ದಾರ ಕಚೇರಿಗಳಲ್ಲಿ ಆಯಾ ತಾಲೂಕುಗಳಲ್ಲಿ ಸರ್ಕಾರಿ ಭೂಮಿಯ ವಿವರ, ಅತಿಕ್ರಮಣವಾದ ಕೆರೆ ಮತ್ತು ಭೂಮಿ, ಎಷ್ಟು ವರ್ಷದಿಂದ ಅತಿಕ್ರಮಣವಾಗಿದೆ. ಕೋಡಿಗಳು, ನಾಲಾ, ಹಳ್ಳಗಳು, ನೀರಿನ ಪ್ರಮಾಣ, ಗೋಮಾಳ ಮಾಹಿತಿಯನ್ನು ಕಚೇರಿಗಳಲ್ಲಿ ಪ್ರದರ್ಶಿಸಲು ಎಲ್ಲ ತಹಸೀಲ್ದಾರರು ಕೂಡಲೇ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಿರಿಯ ಅಭಿಯಂತರರು ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಮೂಲಗಳಿಗೆ ನೀರಿನ ಸಂಪರ್ಕ ವ್ಯವಸ್ಥೆಗಳಿಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಬೇಕು. ನೀರಿನ ವಿತರಣಾ ಮಾರ್ಗಗಳಲ್ಲಿ ಯಾವುದೇ ರೀತಿಯ ಸೋರಿಕೆ ಮತು ಹಾನಿಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದರು.
ದೌರ್ಜನ್ಯ ಪ್ರಕರಣಗಳಲ್ಲಿ ಕೊಲೆಯಾದ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಎಫ್‌ಐಆರ್ ದಾಖಲಾದ ತಕ್ಷಣ ಸರ್ಕಾರಿ ನೌಕರಿಯನ್ನು ನೀಡಬೇಕು ಎನ್ನುವ ನಿಯಮಪಾಲನೆ ಮಾಡುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲಾಮಟ್ಟದಲ್ಲಿ ಉಪ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಬೇಕು. ಜಾತಿ ಸಿಂಧುತ್ವ ಪ್ರಮಾಣ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎನ್ನುವ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಮ ಶಾ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲಾನ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ವಿವೇಕಾನಂದ ಪಿ., ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.