ಕೊಪ್ಪಳ: ಬೇಸಿಗೆ ಪ್ರಾರಂಭವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಕೊಪ್ಪಳ ತಾಲೂಕು ನೋಡಲ್ ಅಧಿಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಕುಡಿಯುವ ನೀರಿನ ಕುಂದು ಕೊರತೆ ಸ್ವೀಕರಿಸಿ ಬಗೆಹರಿಸಲು ತಾಪಂ ಸಹಾಯವಾಣಿ ಸಂ 9620410509, 9902315311 ಹಾಗೂ ತಹಸೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂ 7483942249 ಸ್ಥಾಪಿಸಲಾಗಿದ್ದು ಇವುಗಳ ಬಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಾಹಿತಿ ತಲುಪಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಬೇಸಿಗೆ ತಾಪಮಾನ ಹೆಚ್ಚಾಗಿರುವದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು.ನೀರಿನ ಮೂಲ ಪರೀಕ್ಷಿಸುವುದು ಮತ್ತು ನೀರಿನ ಸಂಗ್ರಹಗಾರ ಕಾಲ ಕಾಲಕ್ಕೆ ಸ್ವಚ್ಛಗೊಳಿಸುವದು ಅಗತ್ಯ. ಜಿಪಿಎಸ್ ಫೋಟೊ ದಾಖಲಾತಿ ನಿರ್ವಹಿಸಬೇಕು ಮತ್ತು ಗ್ರಾಮದಲ್ಲಿರುವ ಜಾನುವಾರು ತೊಟ್ಟಿ ಸ್ವಚ್ಛಗೊಳಿಸಿ ಅವುಗಳಿಗೆ ಕುಡಿಯುವ ನೀರು ಭರ್ತಿ ಮಾಡಿದಲ್ಲಿ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರು.ಸಭೆಯಲ್ಲಿ ತಾಪಂ ಇಓ ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹೊನ್ನಪ್ಪ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್ ಎಚ್.,ತಾಲೂಕು ಮಟ್ಟದ ಅಧಿಕಾರಿ,ಎಲ್ಲ ಗ್ರಾಪಂ ಆಡಳಿತಾಧಿಕಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯ ಶಾಖಾಧಿಕಾರಿ, ತಾಪಂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.