ಮುಂಡರಗಿ: ಬೀದಿನಾಯಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ, ಗ್ರಾಪಂ, ಆರೋಗ್ಯ ಇಲಾಖೆ ಸೂಕ್ತವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
2025ರ ಜನವರಿಯಿಂದ ನವೆಂಬರ್ ವರೆಗೂ ತಾಲೂಕಿನಲ್ಲಿ ಒಟ್ಟು 1173 ಜನರಿಗೆ ನಾಯಿ ಕಡಿದ ಪ್ರಕರಣ ಜರುಗಿದ್ದು, ಅದಕ್ಕೆ ಚಿಕಿತ್ಸೆ ಸಹ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಔಷಧ ಸಹ ಆರೋಗ್ಯ ಕೇಂದ್ರದಲ್ಲಿ ಲಭ್ಯವಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞೆ ಡಾ. ತಸ್ಮೀಯಾ ವಿವರಿಸಿದರು.
ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಸಂಬಂಧಿಸಿದಂತೆ ಈಗಾಗಲೆ ಪುರಸಭೆಯಿಂದ ಕ್ರಮ ವಹಿಸಿದ್ದು, ₹4.95 ಲಕ್ಷ ವೆಚ್ಚದಲ್ಲಿ 300 ಬೀದಿನಾಯಿಗಳಿಗೆ ಈ ಚಿಕಿತ್ಸೆ ನೀಡುವುದಕ್ಕೆ ಆನ್‌ಲೈನ್ ಮೂಲಕ ಟೆಂಡರ್ ಕರೆಯಲಾಗಿದೆ. ಒಂದು ನಾಯಿಗೆ ಚಿಕಿತ್ಸೆಗೆ ₹1,650 ಖರ್ಚಾಗುತ್ತದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ವಹಿಸಿದ್ದೇವೆ ಎಂದು ಪುರಸಭೆ ಸಿಬ್ಬಂದಿ ಯಾಕೂಬ್ ಹೇಳಿದರು.ಬೀದಿನಾಯಿ ಕಡಿತದಿಂದ ಮೃತಪಟ್ಟರೆ ಅವರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಗಾಯಗೊಂಡರೆ ಚಿಕಿತ್ಸೆಗಾಗಿ ₹5 ಸಾವಿರ ಸಹಾಯಧನ ನೀಡಬೇಕು. ಪುರಸಭೆ ವ್ಯಾಪ್ತಿ ಇದ್ದರೆ ಪುರಸಭೆಯಿಂದ ಪರಿಹಾರ ನೀಡಬೇಕು. ಗ್ರಾಮೀಣ ಭಾಗದಲ್ಲಿದ್ದರೆ ಆಯಾ ಗ್ರಾಪಂಯವರು ನೀಡಬೇಕು. ಈ ಬಗ್ಗೆ ಕಾನೂನು ಸಹ ಇದೆ. ಸಾಕು ನಾಯಿಗಳಿಂದ ಇಂತಹ ಘಟನೆ ಸಂಭವಿಸಿದರೆ ಅದಕ್ಕೆ ಅದರ ಮಾಲೀಕರೆ ಹೊಣೆ. ಅಧಿಕಾರಿಗಳು ಬೀದಿನಾಯಿಗಳ ಹಾವಳಿ ತಪ್ಪಿಸುವುದಕ್ಕೆ ಮುಂದಾಗಬೇಕು ಎಂದು ಇಒ ವಿಶ್ವನಾಥ ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ವಿಜಯಕುಮಾರ ಬೆಣ್ಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.