ಲಕ್ಷ್ಮೇಶ್ವರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 18ರಿಂದ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಮಾತನಾಡಿ, ತಾಲೂಕಿನಲ್ಲಿ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆ, ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆ, ಬಿಸಿಎನ್ ಕನ್ನಡ ಮಾಧ್ಯಮ ಪ್ರೌಢ ಶಾಲೆ, ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ಶಿಗ್ಲಿಯ ಎಸ್‌ಎಸ್‌ಕೆ ಪ್ರೌಢಶಾಲೆ ಮತ್ತು ಬಾಲೆಹೊಸೂರಿನ ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ಒಟ್ಟು ಆರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಅದಕ್ಕೆ ತಕ್ಕಂತೆ ಅಧೀಕ್ಷಕರು, ಕಸ್ಟೋಡಿಯನ್, ಸ್ಥಾನಿಕ ಜಾಗೃತಿದಳದ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ಮೊಬೈಲ್ ಸ್ವಾಧೀನಧಿಕಾರಿಗಳು, ಕೊಠಡಿ ಮೇಲ್ವಿಚಾರಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ.
ತಾಲೂಕಿನಲ್ಲಿ 14 ಸರ್ಕಾರಿ ಶಾಲೆಗಳು, 8 ಅನುದಾನಿತ ಪ್ರೌಢ ಶಾಲೆಗಳು, 13 ಅನುದಾನರಹಿತ ಪ್ರೌಢ ಶಾಲೆಗಳ 1610 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ’ ಎಂದು ತಿಳಿಸಿದರು.ಸಾರಿಗೆ ಇಲಾಖೆಯ ಲಕ್ಷ್ಮೇಶ್ವರ ಘಟಕ ವ್ಯವಸ್ಥಾಪಕಿ ಸವಿತಾ ಆದಿ ಮಾತನಾಡಿ ‘ಪರೀಕ್ಷಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದರು.