ರೋಣ: ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಸಿದ್ಧತೆ ಕೈಗೊಳ್ಳುವುದು ಅತ್ಯಂತ ಅಗತ್ಯ. ಜನರಿಗೆ ಕುಡಿಯುವ ನೀರಿನ ತೊಂದರೆ ಎದುರಾಗುವ ಪರಿಸ್ಥಿತಿ ಬರಬಾರದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಮಹತ್ವದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆ ತಯಾರಿಕೆ ಕುರಿತು ಸಮಗ್ರ ಚರ್ಚೆ ನಡೆಸಿ, ಗ್ರಾಮೀಣ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸಲು ಸೂಚಿಸಲಾಯಿತು. ಇನ್ನು ಬೀದಿನಾಯಿಗಳ ಹಾವಳಿ ತಡೆಗಟ್ಟುವಿಕೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಯಿತು ಹಾಗೂ ಈ ಸಂಬಂಧ ಹಣ ಸಂಗ್ರಹಣೆ ಮತ್ತು ವ್ಯವಸ್ಥಿತ ನಿರ್ವಹಣೆ ಕುರಿತು ಚರ್ಚಿಸಲಾಯಿತು.
ಲೈಬ್ರರಿ ಸೆಸ್‌ನ್ನು ಜಿಲ್ಲಾ ಪಂಚಾಯಿತಿ ಖಾತೆಗೆ ಸರಿಯಾಗಿ ಜಮಾ ಮಾಡುವಂತೆ ಸೂಚನೆ ನೀಡಲಾಗಿದ್ದು, ಶೇ. 25 ಪ.ಜಾ., ಪ.ಪಂ. ಸಮುದಾಯದವರಿಗೆ ಮೀಸಲಾದ ಅನುದಾನದ ಸಮರ್ಪಕ ಬಳಕೆ ಬಗ್ಗೆ ವಿಶೇಷ ಗಮನ ಹರಿಸಲು ತಿಳಿಸಲಾಯಿತು. ಪಂಚತಂತ್ರ 2.0 ಯೋಜನೆಯ ವಾರ್ಷಿಕ ಮುಕ್ತಾಯದ ಹಿನ್ನೆಲೆ ಪ್ರಗತಿ ವರದಿಗಳನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಯಿತು. ಸಭೆ ಅಂತ್ಯದಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ನಿಖರ ಹಾಗೂ ಸಂಪೂರ್ಣ ದತ್ತಾಂಶ ಒದಗಿಸಲು ಸೂಚನೆ ನೀಡಲಾಯಿತು.ಈ ವೇಳೆ ತಾಪಂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.