ಕನ್ನಡಪ್ರಭ ವಾರ್ತೆ ಕನಕಪುರ
ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನಕಪುರ ತಾಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪಂಚ ಗ್ಯಾರಂಟಿ ಸೇರಿದಂತೆ ಹಲವು ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ, ತಾಲೂಕಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಬೇಕು ಜೊತೆಗೆ ಆ ಸವಲತ್ತುಗಳು ಫಲಾನುಭವಿಗಳಿಗೆ ತಲುಪಿದ್ದಾವೆಯೇ ಎಂಬುದರ ಕುರಿತು ಖುದ್ದು ಭೇಟಿ ಮಾಡಿ ಫಲಾನುಭವಿಗಳ ಅಭಿಪ್ರಾಯ ಪಡೆದು ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು, ಫಲಾನುಭವಿಗಳು ಸವಲತ್ತುಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ಹಣ ಪಡೆದುಕೊಂಡಿದ್ದರೆ ಆ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಂದರ್ಭದಲ್ಲಿ ಹಣ ಪಡೆದಿದ್ದರೆ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕೆಲಸದ ಒತ್ತಡ ಹೆಚ್ಚಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.ಬೆಂಗಳೂರು ದಕ್ಷಿಣ ಜಿಲ್ಲೆ ವಿಶೇಷವಾದ ಜಿಲ್ಲೆಯಾಗಿದೆ. ಇದು ಬಹಳ ಬಲಿಷ್ಠವಾದ ನಾಯಕರುಗಳನ್ನು ನೀಡಿರುವ ಜಿಲ್ಲೆ. ಚನ್ನಪಟ್ಟಣಕ್ಕೆ ಖಾಸಗಿ ಮೆಡಿಕಲ್ ಕಾಲೇಜು, ರಾಮನಗರದಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯ, ಹಾರೋಹಳ್ಳಿಯಲ್ಲಿ ಖಾಸಗಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದ್ದು, ತುಂಗಣಿಯ ರಾಯಸಂದ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಗುವುದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸ ಲಾಗುತ್ತಿದೆ. ಕನಕಪುರದಲ್ಲಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರಾಮನಗರದ ರಸ್ತೆಗಳನ್ನು ಅಗಲೀಕರಣ ಮಾಡಲು ಸರ್ಕಾರದಿಂದ ಹಣ ಮಂಜೂರು ಮಾಡಲು ಕ್ರಮ ವಹಿಸಲಾಗುವುದು. ಕನಕಪುರ ಟೌನಿಗೆ ರಿಂಗ್ ರೋಡ್ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.