ಕುಡಿಯುವ ನೀರು, ಮೇವು ಪೂರೈಕೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ದಿವಾಕರ್‌

KannadaprabhaNewsNetwork | Published : May 5, 2024 2:04 AM

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.

ಹೊಸಪೇಟೆ: ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಕೇಶ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.

ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ಕೂಡ್ಲಿಗಿ ತಾಲೂಕಿನ 33 ಗ್ರಾಮಗಳಲ್ಲಿ 36 ಖಾಸಗಿ ಬೋರ್‌ವೆಲ್, ಕೊಟ್ಟೂರು ತಾಲೂಕಿನಲ್ಲಿ 11 ಗ್ರಾಮಗಳಲ್ಲಿ 15 ಖಾಸಗಿ ಬೋರ್‌ವೆಲ್, ಹರಪನಹಳ್ಳಿ ತಾಲೂಕಿನಲ್ಲಿ 85 ಗ್ರಾಮಗಳಲ್ಲಿ 111 ಖಾಸಗಿ ಬೋರ್‌ವೆಲ್, ಹೊಸಪೇಟೆ ಗ್ರಾಮೀಣ ಪ್ರದೇಶದ 13 ಹಳ್ಳಿಗಳಲ್ಲಿ 18 ಖಾಸಗಿ ಬೋರ್‌ವೆಲ್, ಹಡಗಲಿ ತಾಲೂಕಿನ 19 ಗ್ರಾಮಗಳಲ್ಲಿ23 ಖಾಸಗಿ ಬೋರ್‌ವೆಲ್‌ಗಳು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ 32 ಗ್ರಾಮಗಳಲ್ಲಿ 41 ಖಾಸಗಿ ಬೋರ್‌ವೆಲ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸಭೆಗೆ ತಿಳಿಸಿದರು.

ಕಾಲಕಾಲಕ್ಕೆ ಈ ಖಾಸಗಿ ಬೋರವೆಲ್‌ಗಳಿಗೆ ಮಾಸಿಕ ಬಾಡಿಗೆ ವೆಚ್ಚವನ್ನು ಪಾವತಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಕೂಡ್ಲಿಗಿ ತಾಲೂಕಿನಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಾಗಿರುತ್ತದೆ. ಅದರ ಮೂಲಕ 43,740 ಕೆಜಿ ಮೇವನ್ನು ರೈತರಿಗೆ ವಿತರಿಸಲಾಗಿದೆ ಎಂದು ತಹಸೀಲ್ದಾರರು ಸಭೆಗೆ ಮಾಹಿತಿ ನೀಡಿದರು. ಕೂಡ್ಲಿಗಿ ತಾಲೂಕಿನ ಗಂಡಬಮ್ಮನಳ್ಳಿ ಪಂಚಾಯಿತಿಯಲ್ಲಿ ಗೋಶಾಲೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಈ ಗೋಶಾಲೆಗೆ ಸೂಕ್ತವಾದ ಶೆಡ್ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ತಹಸೀಲ್ದಾರರು ಮತ್ತು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪ್ರದೇಶಗಳಲ್ಲಿ ಯಾವುದೇ ವಾರ್ಡಗಳಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ನೀರನ್ನು ಶುಚಿಗೊಳಿಸಿ ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಇನ್ನು ವಾರದ ಮಟ್ಟಿಗೆ ಬಿಸಿ ಗಾಳಿ (ಹೀಟ್ ವೇವ್) ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ತಮ್ಮ ಪಂಚಾಯಿತಿ ಮತ್ತು ಗ್ರಾಮಮಟ್ಟದಲ್ಲಿ ಜಾನುವಾರುಗಳಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ವಿಡಿಯೋ ಸಂವಾದ ಸಭೆಯಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಪೋಮ್ ಸಿಂಗ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಿದಾನಂದ ಪೂಜಾರಿ, ನಗರ ನೀರು ಸರಬರಾಜು ಮತ್ತು ಕೊಳಚೆ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ ಪಾಟೀಲ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Share this article