ಶಿವಮೊಗ್ಗ: ಶೈಕ್ಷಣಿಕ ಉನ್ನತಿಗಾಗಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಂಶೋಧನಾ ಪ್ರಕ್ರಿಯೆಗೆ ಲಾಭ ಪಡೆಯಿರಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸರ್.ಎಂ.ವಿ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಕ್ಕೂಟ, ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ''''''''ಶೈಕ್ಷಣಿಕ ಉತ್ಕೃಷ್ಟತೆಗಾಗಿ ಇ-ಸಂಪನ್ಮೂಲಗಳು'''''''' ಕುರಿತ ಒಂದು ದಿನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ ಮನುಷ್ಯನನ್ನು ಮಾನವನನ್ನಾಗಿ ಮಾಡುತ್ತದೆ. ಮಾನವೀಯ ಗುಣಕ್ಕಾಗಿ ನಮ್ಮ ಇತಿಹಾಸದ ಜೊತೆಗೆ ವಾಸ್ತವತೆಯ ಜ್ಞಾನವನ್ನು ಪಡೆದು ಭವಿಷ್ಯದ ಸಾಧಕರಾಗಿ. ಜೀವನವೆಂಬುದು ಬರೆದಿಡುವ ಪುಸ್ತಕಗಳಾಗಬೇಕು ಮತ್ತು ಆ ಪುಸ್ತಕವನ್ನು ಎಲ್ಲರೂ ಓದುವಂತಿರಬೇಕು. ಶಾಲೆಯಲ್ಲಿ ಪಡೆದ ಅಗ್ರಸ್ಥಾನಕ್ಕಿಂತ, ಜೀವನದಲ್ಲಿ ಪಡೆದ ಅಗ್ರಸ್ಥಾನ ಬದುಕಿಗೆ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಟಿಯು ಮುಖ್ಯ ಗ್ರಂಥಪಾಲಕರಾದ ಡಾ.ಸೋಮರಾಯ ಬಿ.ತಳೊಳ್ಳಿ, ಇ-ಸಂಪನ್ಮೂಲಗಳನ್ನು ಸಂಶೋಧನಾರ್ಥಿಗಳಿಗೆ ಮತ್ತಷ್ಟು ಹತ್ತಿರವಾಗಿಸುವ ಕಾರ್ಯವನ್ನು ವಿಟಿಯು ಮಾಡುತ್ತಿದೆ. ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಗ್ರಂಥಾಲಯಗಳು ನಾವೀನ್ಯಯುತ ಸಂಪನ್ಮೂಲಗಳನ್ನು ಅಧ್ಯಯನ ಮಾಡುವಂತಹ ಸೌಲಭ್ಯ ನೀಡುತ್ತಿದೆ ಎಂದು ಹೇಳಿದರು.ಎನ್.ಇ.ಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.
ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಕಾಲೇಜಿನ ಗ್ರಂಥಪಾಲಕ ಚಂದ್ರಕಾಂತ್.ಆರ್.ಭಟ್, ಉಪಗ್ರಂಥಪಾಲಕ ಸತೀಶ್.ಕೆ.ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸಂಶೋಧನಾರ್ಥಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಅಂತಾರಾಷ್ಟ್ರೀಯ ಪ್ರಕಾಶನಗಳಾದ ಎಲ್ಸಿವಿಯರ್, ಸ್ಪ್ರಿಂಜರ್ ನೇಚರ್, ಕ್ವಿಕ್ ಲರ್ನರ್, ಕ್ನಿಬ್ಸ್, ಎಬ್ಸಕೊ, ಬಿ.ಎಸ್.ಪಿ.ಇ-ಬುಕ್, ಐಇಇಇ, ಮಿಂಟ್ ಬುಕ್, ಡ್ರಿಲ್ಬಿಟ್, ಎಮರಲ್ಡ್, ಕೇಂಬ್ರಿಡ್ಜ್ ಪ್ರಕಾಶನಗಳ ಪ್ರಕಾಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.