ಕನ್ನಡಪ್ರಭ ವಾರ್ತೆ ಹುಮನಾಬಾದ್
ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ನಡೆಸುವಂತೆ, ಕ್ಷೇತ್ರ ನೀರಿನ ಪರೀಕ್ಷಾ ಕಿಟ್ ಪ್ರಯೋಜನೆ ಪಡೆಯುವಂತೆ ತಾಪಂ ಅಧಿಕಾರಿ ಡಾ. ಗೋವಿಂದ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ (ಫೀಲ್ಡ್ ಟೆಸ್ಟ್ ಕಿಟ್) ಕ್ಷೇತ್ರ ನೀರಿನ ಪರೀಕ್ಷಾ ಕಿಟ್ ಪೂರೈಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತೆರೆದ ಬಾವಿ, ಕೊಳವೆ ಬಾವಿ, ಕುಡಿಯುವ ನೀರು ಸೇರಿದಂತೆ ಆರೋಗ್ಯಕ್ಕೆ ಮಾರಕ ಪ್ಲೋರೈಡ್ ಮತ್ತು ನೀರಿನ ಗಡಸುತನವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚುವ ಉದ್ದೇಶದಿಂದ ಸಂಬಂಧಿಕರಿಗೆ ತರಬೇತಿ ನೀಡುವ ಮೂಲಕ ಕಿಟ್ ವಿತರಿಸಲಾಗುತ್ತಿದೆ. ಇದನ್ನು ನೀರಿನ ಗುಣಮಟ್ಟ ನಿರ್ವಹಣೆ ಮಾಹಿತಿ ವ್ಯವಸ್ಥೆ (ಡಬ್ಲುಕ್ಯುಎಂಐಎಸ್) ನಲ್ಲಿ ದಾಖಲೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಪ್ರಯೋಗಾಲಯದ ವಿಶ್ಲೇಷಕರಾದ ವಿವೇಕಾನಂದ ಸಾಟೆ ಮಾತನಾಡಿ, ಒಂದು ಕ್ಷೇತ್ರ ನೀರಿನ ಪರೀಕ್ಷಾ ಕಿಟ್‌ನಿಂದ ಕನಿಷ್ಠ ನೂರರಷ್ಟು ನೀರಿನ ಮಾದರಿ ಪರೀಕ್ಷಿಸಬಹುದು. ಕಿಟ್‌ನಲ್ಲಿರುವ ಪರೀಕ್ಷಕ ರಾಸಾಯನಿಕಗಳ ಬಾಳಿಕೆ ಒಂದು ವರ್ಷ ಮಾತ್ರ ಇರುತ್ತದೆ. ಈ ಕುರಿತು ಕಾಳಜಿ ವಹಿಸುವ ಮೂಲಕ ನೀರಿನ ಮಾದರಿಗಳು ಸ್ಥಳದಲ್ಲೇ ಪರೀಕ್ಷಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ಬರುವ ಎಲ್ಲಾ ಜಲಮೂಲಗಳನ್ನು ಪರೀಕ್ಷಿಸಿ ಶುದ್ಧ ನೀರು ಕೊಡಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಅಭಿಯಂತರರಿಗೆ ಮಾಹಿತಿ ಸಲ್ಲಿಸಬೇಕು ಎಂದು ತಿಳಿಸಿದರು.ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನ ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಉಪವಿಭಾಗ ಸಹಾಯಕ ಅಭಿಯಂತರ ಮಾಣಿಕರಾವ್, ಕಿರಿಯ ಸಹಾಯಕ ಎಂಜಿನಿಯರ್ ಶಿವಕುಮಾರ, ಸಮಾಜ ಕಲ್ಯಾಣ ಅಧಿಕಾರಿ ನಿಂಗರಾಜ, ಬಿಸಿಎಂ ತಾಲೂಕು ಅಧಿಕಾರಿ ವಿಠಲ ಸೇಡಂಕರ್, ಸಂತೋಷಕುಮಾರ, ಪಿಡಿಒ ಸಾಯಿನಾಥ ಸೇರಿದಂತೆ ಅನೇಕರು ಪಾಲ್ಗೊಂಡು ಮಾಹಿತಿ ಪಡೆದರು.