ರಾಜ್ಯ ಸರ್ಕಾರ ರೂಪಿಸುತ್ತಿರುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸಿಕೊಂಡು ಸುಖಮಯ ಜೀವನಕ್ಕೆ ಮುನ್ನುಡಿ ಬರೆಯಬೇಕೆಂದು ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಸಲಹೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಸರ್ಕಾರ ರೂಪಿಸುತ್ತಿರುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸಿಕೊಂಡು ಸುಖಮಯ ಜೀವನಕ್ಕೆ ಮುನ್ನುಡಿ ಬರೆಯಬೇಕೆಂದು ಶಾಸಕ, ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಸಲಹೆ ನೀಡಿದ್ದಾರೆ.
ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜಿಲ್ಲಾ ಕಾನಿಪ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ವಿತರಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯಡಿ ಇ-ಶ್ರಮ ಕಾರ್ಡ್ ನೋಂದಣಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ, ಸಾಂಕೇತಿಕವಾಗಿ ಐವರಿಗೆ ಇ-ಶ್ರಮ ಕಾರ್ಡ್ ವಿತರಿಸಿ ಮಾತನಾಡಿ, ಬೆಳಗ್ಗೆ ಎಲ್ಲ ಓದುಗರಿಗೆ ನಿತ್ಯದ ಮಾಹಿತಿ ಒದಗಿಸುವ ಪತ್ರಿಕೆ ವಿತರಕರ ಕಾರ್ಯ ಶ್ಲಾಘನೀಯ, ಅವರ ಸಾಮಾಜಿಕ ಸೇವೆ ಸ್ಮರಣೀಯ, ಅದಕ್ಕೆ ಬೆಲೆ ಕಟ್ಟಲಾಗದು ಎಂದರು.
ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಕಾರ್ಮಿಕ ಇಲಾಖೆ ಮತ್ತು ಕಾನಿಪ ಸಂಘದ ಕಾರ್ಯ ಶ್ಲಾಘನೀಯ, ಈ ದಿಸೆಯನ್ನು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಅಪಘಾತಗಳಾಗದಂತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸುರಕ್ಷಿತ ಸಂಚಾರ ಹಾಗೂ ಸುರಕ್ಷಿತ ಬದುಕಿಗೆ ಮುಂದಾಗುವ ಮೂಲಕ ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕೆಂದು ಹೇಳಿ ಇಂತಹ ಜನಪರ ಕಾರ್ಯಕ್ರಮಗಳಿಗೆ ತಮ್ಮ ನೆರವು ಸದಾ ಇರುತ್ತದೆ ಎಂದರು.
ಇ-ಶ್ರಮ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಬದುಕಿನಲ್ಲಿ ಸಿಗುವ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು, ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ ಮಾತನಾಡಿ, 2023ರ ಒಂದೇ ವರ್ಷದಲ್ಲಿ ಸಾಕಷ್ಟು ಅಪಘಾತ ಸಂಭವಿಸಿ 410 ಜನರು, 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕು. ಪೊಲೀಸ್ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದಕೊಂಡು ಸುಖಮಯ ಕುಟುಂಬಮಯ ಜೀವನಕ್ಕೆ ಆದ್ಯತೆ ನೀಡಬೇಕೆಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ತರನಂ ಬೆಂಗಾಲಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸಿಂದಗಿ ಮಾತನಾಡಿದರು.
ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ಧಲಬಂಜನ್ ಮಾತನಾಡಿ, ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್‌ಗಳ ಸೌಲಭ್ಯಗಳನ್ನು ಕಲ್ಪಿಸಿರುವ ಸರ್ಕಾರದ ಕಾರ್ಯ ಜನಪರವಾಗಿದ್ದು, ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಸಂಘಟಿತ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ಹಾಗೂ ಇ-ಶ್ರಮ ಕಾರಡ್‌ಗಳನ್ನು ಗಣ್ಯರು ವಿತರಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಆನಂದ ಜಿಗಜಿನ್ನಿ ವೈದ್ಯಕೀಯ ಸೌಲಭ್ಯಗಳ ಸುರಕ್ಷಿತ ಕಿಟ್ ವಿತರಿಸಿದರು. ರಾಜ್ಯ ಕಾನಿಪ ಸಂಘದ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಕಾಶ ಬಾಳಕ್ಕನವರ ಅವರನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸನ್ಮಾನಿಸಿದರು. ರಾಜ್ಯ ಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಖಜಾಂಚಿ ಜಗದೀಶ ಗಾಣಿಗೇರ, ಪತ್ರಿಕಾ ವಿತರಕರು, ಪತ್ರಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಎಸ್. ಕಲ್ಯಾಣಿ ಸ್ವಾಗತಿಸಿದರು. ಪತ್ರಕರ್ತ ಶ್ರೀಶೈಲ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬಾಳಕನ್ನವರ ನಿರೂಪಿಸಿದರು. ಸಂತೋಷ ದೇಶಪಾಂಡೆ ವಂದಿಸಿದರು.