ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬಳಿಕ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರವು ಮನೆ ಮನೆಗೆ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಪಟ್ಟಣದ ೧೫ ಸಾವಿರ ಜನಸಂಖ್ಯೆಗೆ ಒಂದು ನಮ್ಮ ಕ್ಲಿನಿಕ್ ಔಷಧ ಚಿಕಿತ್ಸಾಲಯವನ್ನು ತೆರೆಯಲಿದೆ. ನಮ್ಮ ಕ್ಲಿನಿಕ್ ಸೌಲಭ್ಯವು ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ನೀಡುವ ಉತ್ತಮ ಯೋಜನೆಯಾಗಿದೆ. ಸರ್ಕಾರವು ಜನರ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ನಮ್ಮ ಕ್ಲಿನಿಕ್ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಸಾಂಕ್ರಾಮಿಕ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಲು ನಮ್ಮ ಕ್ಲಿನಿಕ್ ಉಪಯುಕ್ತವಾಗಲಿದೆ. ಜನರಿಗೆ ಆರೋಗ್ಯ ಸಮಸ್ಯೆ ಕಂಡುಬಂದರೆ ಆಶಾ ಕಾರ್ಯಕರ್ತೆಯರು ನಮ್ಮ ಕ್ಲಿನಿಕ್ ಔಷಧಾಲಯಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲು ನೆರವಾಗಲಿದ್ದಾರೆ. ಜನರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಮಾತನಾಡಿ, ನಮ್ಮ ಕ್ಲಿನಿಕ್ ಕಾರ್ಯಕ್ರಮವು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಪ್ರತಿ ೧೫ ಸಾವಿರ ಜನರಿಗೆ ಒಂದು ಔಷಧಾಲಯ ತೆರೆದು ಜನರಿಗೆ ಅಲ್ಲಲ್ಲಿಯೇ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಡೇ ಕೇರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ನಮ್ಮ ಕ್ಲಿನಿಕ್ ಎಂದರು.ನಮ್ಮ ಕ್ಲಿನಿಕ್ ಔಷಧಾಲಯದಲ್ಲಿ ತಲಾ ಒಬ್ಬರು ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಗ್ರೂಪ್ ಡಿ ನೌಕರರು ಕರ್ತವ್ಯ ನಿರ್ವಹಿಸಲಿದ್ದಾರೆ. ನಮ್ಮ ಕ್ಲಿನಿಕ್ ವ್ಯವಸ್ಥೆಯು ರಾಜ್ಯಸರ್ಕಾರ ಹಾಗೂ ಕೇಂದ್ರದ ಪಿಎಂ-ಎಬಿಐಎಂ ಹಣಕಾಸು ಯೋಜನೆಯಡಿ ಸ್ಥಾಪಿತವಾಗಿದೆ. ಜನರಿಗೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ ನಮ್ಮ ಕ್ಲಿನಿಕ್‌ನಲ್ಲಿ ಪರೀಕ್ಷೆ ಮಾಡಿ ಔಷಧೋಪಚಾರ ನೀಡಲಾಗುವುದು. ಉಳಿದಂತೆ ದೊಡ್ಡ ತೊಂದರೆಗಳಿಗೆ ಮೇಲ್ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಪ್ರಭಾರ ಪೌರಾಯುಕ್ತ ಪ್ರಕಾಶ್, ಜಿಲ್ಲಾ ಮಲೇರಿಯಾ ಹಾಗೂ ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್‌ಕುಮಾರ್, ಇತರರು ಇದೇ ಸಂದರ್ಭದಲ್ಲಿ ಇದ್ದರು.