ಕನ್ನಡ ನಾಮಫಲಕ ಅಳವಡಿಕೆಗೆ ಸೂಕ್ತ ಕ್ರಮಕೈಗೊಳ್ಳಿ

KannadaprabhaNewsNetwork |  
Published : Nov 02, 2025, 04:15 AM IST
ಜಮಖಂಡಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿನೀಡಿ ಉಪನ್ಯಾಸಕ ಡಾ. ಮಟೊಳ್ಳಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕನ್ನಡ ನಾಮಫಲಕಗಳ ಅಳವಡಿಕೆಗೆ ಪೌರಾಯುಕ್ತರು ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕನ್ನಡ ನಾಮಫಲಕಗಳ ಅಳವಡಿಕೆಗೆ ಪೌರಾಯುಕ್ತರು ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ತಾಲೂಕು ಆಡಳಿತ, ಕನ್ನಡಸಂಘದ ಆಶ್ರಯದಲ್ಲಿ ನಗರದ ಹೊಕ್ಕಳವಾವೊ ಪ್ರದೇಶದಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬೇರೆ ರಾಜ್ಯಗಳ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಕನ್ನಡ ನಾಮಫಲಕ ಅಳವಡಿಸಬೇಕು. ಅವರೊಂದಿಗೆ ಕನ್ನಡಿಗರು ಬೆಳೆಯಬೇಕು ಎಂದರು.

2500 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಗೆ 2008ರಿಂದ ಅಳಿವು- ಉಳಿವಿನ ಚರ್ಚೆಗಳು ಪ್ರಾರಂಭವಾಗಿದೆ. ಆಂಗ್ಲ ಪ್ರಸಿದ್ಧ ಕವಿ ಸೇಕ್ಸಪೀಯರ್‌ ಅವರ ಕೃತಿಗಳಿಗಿಂತಲೂ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಯುನಿಕೋಡ್‌ನಲ್ಲಿ ಬಳಕೆಯಾಗುತ್ತಿದೆ. ಐಫೋನ್‌ನಲ್ಲೂ ಕನ್ನಡ ಬಳಸಬಹುದಾಗಿದೆ. ಬಂಗಾಳಿ ಬಿಟ್ಟರೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಬಂದಿವೆ. 2ನೇ ಸ್ಥಾನದಲ್ಲಿದೆ. ವಿಶ್ವದ 22 ಭಾಷೆಗಳಲ್ಲಿ ಕನ್ನಡವು ಒಂದು ಅದರ ಬಗ್ಗೆ ಹೆಮ್ಮೆ ಇರಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ನಾಡಿನ ಪ್ರಸಿದ್ಧ ಕವಿಗಳ ಕೃತಿಗಳನ್ನು ಓದಬೇಕು. ಗಡಿಪ್ರದೇಶಗಳಲ್ಲಿ ಕನ್ನಡದ ಭಾಷೆಯ ಬಗ್ಗೆ ಗೌರವ ಹೆಚ್ಚಲು, ಘರ್ಷಣೆಗಳಾಗದಂತೆ ಒಗ್ಗಟ್ಟಾಗಿ ಕನ್ನಡದ ಉಳುವಿಗೆ ಶ್ರಮಿಸಬೇಕು ಎಂದರು.

ಜಂಬಗಿ ಬ್ರಿಜ್‌ಗೆ ಸಾಹಿತಿ ರಾವ್‌ಬಹದ್ದೂರ ಹೆಸರಿಡಿ:

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ತಾಲೂಕಿನ ಜಂಬಗಿ ಗ್ರಾಮದ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಗೆ ತಾಲೂಕಿನ ಹಿರಿಯ ಸಾಹಿತಿ ರಾವಬಹದ್ದೂರ ಅವರ ಹೆಸರಿಡಬೇಕು. ಅದಕ್ಕಾಗಿ ಶಾಸಕರು ಮತ್ತು ಮಾಜಿ ಶಾಸಕರು ಜಂಟಿಯಾಗಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದರು. ಕನ್ನಡಕ್ಕಾಗಿ ಶ್ರಮಿಸಿದ ಸಾಹಿತಿಗಳಲ್ಲಿ ಒಬ್ಬರಾದ ರಾವಬಹದ್ದೂರ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಗ್ರಾಮಾಯಣ ಅವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ. ಅವರ ಸಾಹಿತ್ಯಪ್ರೇಮ ಮತ್ತು ಸೇವೆಯ ಕುರಿತು ಮುಂದಿನ ಪೀಳಿಗೆಗೆ ಪರಿಚಯವಾಗಬೇಕು ಎಂದರು.

ಜಮಖಂಡಿಯ ರಾಜರಾಗಿದ್ದ ಪಟವರ್ಧನ ಅವರು, ಜಂಬಗಿ ಬ್ರಿಜ್‌, ಕುಡಚಿ ವರೆಗೆ ರೈಲುಮಾರ್ಗ ಹಾಗೂ ಜಮಖಂಡಿಯನ್ನು ಜಿಲ್ಲಾಕೇಂದ್ರವಾಗಬೇಕೆಂಬ ಕಸನು ಕಂಡಿದ್ದರು. ಅವರ ಆಶಯ ಈಡೇರಿಸುವ ಕೆಲಸವಾಗಬೇಕು. ವಚನ ಸಾಹಿತ್ಯ 40 ಭಾಷೆಗಳಲ್ಲಿ ತರ್ಜುಮೆಯಾಗಿದೆ. ಇನ್ನೂ ವಿದೇಶಿಯ 10 ಭಾಷೆಗಳಿಗೆ ತರ್ಜುಮೆ ಮಾಡುವ ಕೆಲಸ ನಡೆದಿದೆ, ಅದಕ್ಕಾಗಿ ಅರವಿಂದ ಜತ್ತಿಯವರು ಕಾರ್ಯನಿರತರಾಗಿದ್ದು, ಪ್ರಧಾನಿ ಮೋದಿಯವರ ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು. ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಕೊರತೆಯಾಗಿದೆ. 13 ಶಾಲೆಗಳಲ್ಲಿ ಮಕ್ಕಳಿಲ್ಲ, 8 ಶಾಲೆಗಳನ್ನು ಮುಚ್ಚಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ, ನಗರದಲ್ಲಿ ಪಟವರ್ಧನ ಮಹಾರಾಜರ ವೃತ್ತ ನಿರ್ಮಾಣ ಮಾಡಬೇಕೆಂದರು. ಮಾಜಿ ವಿಪ ಸದಸ್ಯ ಜಿ.ಎಸ್‌.ನ್ಯಾಮಗೌಡ ಮಾತನಾಡಿದರು. ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಗೌರವ ಸ್ವೀಕರಿಸಿ ಉಪನ್ಯಾಸಕ ಡಾ.ಸಂಗಮೇಶ ಮಟೊಳ್ಳಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು. ಕನ್ನಡ ಸಂಘದ ಅಧ್ಯಕ್ಷ ದೇವಲ್‌ ದೇಸಾಯಿ ಕನ್ನಡ ಸಂಘದ ಕಾರ್ಯವೈಖರಿ ತಿಳಿಸಿದರು.

ಕಸ್ತೂರಿಬಾ ಶಾಲೆ, ಜಿಜಿ ಹೈಸ್ಕೂಲ ವಿದ್ಯಾರ್ಥಿಗಳು ರೂಪಕ ಪ್ರದರ್ಶನ ಮಾಡಿದರು. ಪಿಯುಸಿ ವಿದ್ಯಾರ್ಥಿನಿ ಸೌಮ್ಯಾ ನಾವಿ ಹಾಗೂ ವಿಕಲ ಚೇತನ ವಿದ್ಯಾರ್ಥಿಗೆ ಲ್ಯಾಪ್‌ಟಾಪ್‌ ನೀಡಲಾಯಿತು. ಪತ್ರಕರ್ತ ಪೀರಸಾಬ ಕೊಡತಿ ಸ್ವಲಿಖಿತ ಕವನ ವಾಚನ ಮಾಡಿದರು. ತಹಸೀಲ್ದಾರ್‌ ಅನೀಲ ಬಡಿಗೇರ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಉಪಾಧ್ಯಕ್ಷೆ ರೇಖಾ ಕಾಂಬಳೆ, ಪೌರಾಯುಕ್ತ ಜ್ಯೋತಿ ಗಿರೀಶ, ನಗರ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೊಮಿನ, ಸಿಪಿಐ ಮಲ್ಲಪ್ಪ ಮಡ್ಡಿ, ತಾಪಂ ಇಒ ಸಚಿನ ಮಾಚಕನೂರು, ಅಬಕಾರಿ ಅಧಿಕಾರಿ ಗೀತಾ ತೆಗ್ಯಾಳ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಅರುಣ ಕುಮಾರ ಶಾ ಮುಂತಾದವರು ವೇದಿಕೆಯಲ್ಲಿದ್ದರು.

ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕನ್ನಡ ಸಂಘದ ಸಂತೋಷ ಚನಾಳ, ಶ್ರೀಕಾಂತ ಪತ್ತಾರ, ಮಹೇಶವಾಡಿಗಿ, ಈಶ್ವರ ಅಂಗಡಿ, ಬೀಮು ಸದಾಶಿವ ಕತಾಟೆ, ರಫಿಕ ಸೌದಾಗರ, ಶ್ರೀಶೈಲ ದಡ್ಡಿಮನಿ, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು. ಮಕ್ಕಳು ಕನ್ನಡದ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರ ವೇಶ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಅಸ್ಕಿ ಸರ, ರವಿತೇಲಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ ಅಶೋಕ ಬಸಣ್ಣವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’