ಹುಬ್ಬಳ್ಳಿ: ನಗರದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಸ್ವಚ್ಛತೆಗೆ, ಬೀದಿದೀಪ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕೆಲವು ಬಡಾವಣೆಗಳಲ್ಲಿ ಬೀದಿ ದೀಪಗಳೇ ಇಲ್ಲ. ಹಬ್ಬದ ಸಂದರ್ಭದಲ್ಲಿ ಬೀದಿ ದೀಪಗಳು ಇಲ್ಲದಿದ್ದರೆ ಅಹಿತಕರ ಘಟನೆಗೆ ಕಾರಣವಾಗುತ್ತದೆ. ಎಲ್ಲೆಡೆ ಬೀದಿ ದೀಪಗಳು ಸಮರ್ಪಕವಾಗಿ ಇರುವಂತೆ ಹಾಗೂ ತ್ವರಿತವಾಗಿ ನಿರ್ವಹಣೆ ಕೈಗೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು. ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸುಧಾರಿಸಬೇಕು. ಪ್ರತಿ 6-8 ದಿನಗಳಿಗೊಮ್ಮೆ ನೀರು ಪೂರೈಸುತ್ತಿರುವ ಬಡಾವಣೆಗಳಲ್ಲಿ ಪ್ರತಿ 5-6 ದಿನಗಳಿಗೊಮ್ಮೆ ನೀರು ಪೂರೈಸಲು ಹಾಗೂ ತಗ್ಗು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದರು.
ಗಣೇಶೋತ್ಸವದ ವೇಳೆ ಡಿಜೆ ಹಚ್ಚುವ ಪದ್ಧತಿ ಹಲವು ವರ್ಷಗಳಿಂದ ಜಾರಿಯಲ್ಲಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಅದಕ್ಕೆ ಈಗ ಅವಕಾಶವಿಲ್ಲ. ಡೊಳ್ಳು, ಜಗ್ಗಲಿಗೆ, ಝಾಂಜ್ ಇತ್ಯಾದಿ ವಾದ್ಯಗಳಿಗೆ ಯಾವುದೇ ನಿರ್ಬಂಧ ಇಲ್ಲ. ಇವುಗಳಿಗೆ ಸಮಯ ಮೀತಿ ಹಾಕದೆ ಬಳಕೆಗೆ ಮುಕ್ತ ಅವಕಾಶ ಕಲ್ಪಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದರು.ಈ ವೇಳೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿ ಇರುವ ಅಪಾಯಕಾರಿ ಮರಗಳನ್ನು ಕಡಿಯುವ ವಿಷಯದಲ್ಲಿ ಟೆಂಡರ್, ಇತ್ಯಾದಿ ಎಂದು ಸಮಯ ವ್ಯರ್ಥ ಮಾಡಬಾರದು. ಅರಣ್ಯ ಇಲಾಖೆ ಹಾಗೂ ಪಾಲಿಕೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಬಂದೋಬಸ್ತ್‌ಗೆ ಕ್ರಮ
ಈ ವೇಳೆ ಉಪ ಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಮೇಯರ್ ವೀರಣ್ಣ ಸವಡಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಸ್. ವಿಜಯಕುಮಾರ್, ವಿಠಲ ತುಬಾಕೆ, ಎಸ್.ಎನ್. ಗಣಾಚಾರಿ, ಸಂತೋಷ ಯರಂಗಳಿ, ಸಹಾಯಕ ಆಯುಕ್ತರಾದ ಎಂ.ಬಿ. ಸಬರದ, ಗಿರೀಶ ತಳವಾರ, ರಮೇಶ ನೂಲ್ವಿ, ಹೆಸ್ಕಾಂ ಎಇಇ ವಿಶ್ವನಾಥ ಶಿರಹಟ್ಟಿಮಠ, ಆರ್‌ಎಫ್‌ಒ ಮಹಾದೇವ ರಾಯನಗೌಡ್ರ ಸೇರಿದಂತೆ ಹಲವರಿದ್ದರು.