ಗ್ಯಾರಂಟಿ ಯೋಜನೆಗಳು ತಲುಪಲು ಪರಿಣಾಮಕಾರಿ ಆಗಿ ಕ್ರಮವಹಿಸಿ

KannadaprabhaNewsNetwork |  
Published : Mar 27, 2025, 01:00 AM IST
26ಸಿಎಚ್‌ಎನ್‌56ಚಾಮರಾಜನಗರದ ಜಿಲ್ಲಾಡಳಿತ ಭವನದ  ಹಳೆ ಕೆ.ಡಿ.ಪಿ.ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ  ಹೆಚ್.ವಿ.ಚಂದ್ರು ಅವರು ನಡೆಸಿದರು. | Kannada Prabha

ಸಾರಾಂಶ

ಚಾಮರಾಜನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಅವರು ತಿಳಿಸಿದರು.

ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಅಧಿಕಾರಿಗಳು ಯೋಜನೆ ಜಾರಿಯಲ್ಲಿ ಮುತುವರ್ಜಿ ವಹಿಸಿ ಜನರು ಸೌಲಭ್ಯ ಪಡೆಯಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಯೋಜನೆಗಳನ್ನು ತಲುಪಿಸಿ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯ ಪ್ರಗತಿ ಪರಿಶೀಲಿಸಿದ ವೇಳೆ ಯೋಜನೆಯಡಿ ದೊರಕುತ್ತಿರುವ ಸೌಲಭ್ಯಗಳ ಮಾಹಿತಿ ಒಳಗೊಂಡ ಫಲಕಗಳನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರದರ್ಶಿಸಬೇಕು. ಸೌಲಭ್ಯ ಪಡೆಯಲು ಅರ್ಹರಾಗಿರುವ ಯಾವ ಫಲಾನುಭವಿಯೂ ಕೂಡ ಯೋಜನೆಯಿಂದ ವಂಚಿತರಾಗಬಾರದು. ಯಾವುದೇ ತೊಡಕು-ತೊಂದರೆಗಳಿದ್ದರೆ ಪರಿಹರಿಸಬೇಕು ಎಂದು ಸೂಚಿಸಿದರು. ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗಲು ಬಾಕಿ ಇರುವ ಗ್ರಾಹಕರ ವಿವರ ಪಡೆದು ಯೋಜನೆ ತಲುಪಿಸುವ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಅರ್ಹರೆಲ್ಲರಿಗೆ ಸೌಲಭ್ಯ ಸಿಗಬೇಕು. ಅರ್ಜಿಗಳ ವಿಲೇವಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಯೋಜನೆಯ ಪ್ರಯೋಜನ ಪಡೆಯಲು ಕ್ರಮ ವಹಿಸಬೇಕೆಂದರು.

ಶಕ್ತಿ ಯೋಜನೆ ಪ್ರಯೋಜನವಾಗುತ್ತಿದ್ದು ಗ್ರಾಮಾಂತರ ಭಾಗಗಳಲ್ಲಿ ಪ್ರಯಾಣಿಕರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಬಸ್ಸು ಸೇವೆ ಕೊರತೆಯಾಗದಂತೆ ನೋಡಿಕೊಳ್ಳಬೇಕು, ಜಾತ್ರಾ, ಹಬ್ಬದ ಸಂಧರ್ಭಗಳಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಬಸ್ಸುಗಳನ್ನು ನಿಯೋಜಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ಇತರೆ ದಿನ ನಿತ್ಯದ ಪ್ರಯಾಣಿಕರಿಗೆ ಸೇವೆಯಲ್ಲಿ ವ್ಯತ್ಯಯವಾಗಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.ಗೃಹಲಕ್ಷೀ ಯೋಜನೆ ಪ್ರಗತಿಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಬಾಕಿ ಗೃಹಲಕ್ಷೀ ಹಣ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು, ಅರ್ಹರಿರುವ ಬಾಕಿ ಅರ್ಜಿದಾರರು ಯೋಜನೆಯ ಉಪಯೋಗ ಪಡೆಯಲು ತೊಂದರೆಗಳಿದ್ದಲ್ಲಿ ಕೂಡಲೇ ಅಗತ್ಯ ಕ್ರಮ ವಹಿಸಬೇಕು. ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಸಮಸ್ಯೆಗಳಿದ್ದಲ್ಲಿ ಇತ್ಯರ್ಥ ಮಾಡಬೇಕು ಎಂದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಮಾತಾನಾಡಿ, ಡಿಸೆಂಬರ್ ತಿಂಗಳ ಗೃಹಲಕ್ಷೀ ಹಣ ಜಿಲ್ಲೆಯ 2,76,992 ಜನರಿಗೆ ತಲುಪುತ್ತಿದ್ದು ಈಗಾಗಲೇ 1,25,772 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಜಮೆಯಾಗಿದೆ ಉಳಿದ 1,48,800 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಳಿದ ತಿಂಗಳ ಮಾಸಿಕ ಹಣ ಜಮೆಮಾಡುವ ಪ್ರಕ್ರಿಯೆ ಆಗಲಿದೆ ಎಂದರು.ಪದವಿ ಡಿಪ್ಲೋಮೊ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿರುವ ಅಭ್ಯರ್ಥಿಗಳಿಗೆ ಯುವನಿಧಿಯಡಿ ನೀಡಲಾಗುತ್ತಿರುವ ನಿರುದ್ಯೋಗ ಭತ್ಯಗೆ ನೋಂದಾಯಿಸಿರುವ ವಿವರ ಪಡೆದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಕಾಲೇಜುಗಳಿಂದ ಪ್ರತಿ ವರ್ಷ ತೇರ್ಗಡೆಯಾಗುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಪಡೆದು ಯೋಜನೆ ಪ್ರಯೋಜನ ತಲುಪಿಸಬೇಕು ಎಂದರು.

ಜಿಪಂ ಸಿಇಒ ಮೋನಾ ರೋತ್ ಮಾತಾನಾಡಿ, ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಯಾವುದೇ ಸಮಸ್ಯೆ ಬಾರದಂತೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತಕ್ಷಣವೆ ತೆಗೆದುಕೊಳ್ಳಬೇಕು. ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಸದಸ್ಯರು ಗಮನಕ್ಕೆ ತರುವ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ದೇಶನ ನೀಡಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಬಿ.ಪಿ.ನಾಗರಾಜ ಮೂರ್ತಿ, ರವಿ, ಎನ್.ಸಿದ್ದರಾಜು, ಸದಸ್ಯರಾದ ಎಸ್.ಪ್ರಭುಪ್ರಸಾದ್, ಆರ್.ರಾಜೇಂದ್ರ, ಎಂ.ರಾಚಯ್ಯ, ಕೆ.ಬಿ.ಚಿನ್ನಸ್ವಾಮಿ, ಹೆಚ್.ಎನ್.ಜಯರಾಜು, ಭಾಗ್ಯ, ಎಂ.ದೇವರಾಜು ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ವಿವರವಾಗಿ ಚರ್ಚಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ದೀಪಾ, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ, ಜಿಲ್ಲಾ ಉದ್ಯೋಗಾಧಿಕಾರಿ.ಎ. ಮೊಹಮ್ಮದ್ ಅಕ್ಬರ್, ತಾಪಂ ಕಾರ್ಯನಿರ್ವಾಹಕಾಧಿಕಾರಿಗಳು ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ