ಪ್ರವಾಸಿ ತಾಣದ ರಸ್ತೆ, ಕಡಲತೀರಗಳಲ್ಲಿನ ಸುರಕ್ಷತೆ, ಸ್ವಚ್ಛತೆಯ ಕುರಿತು ಸಭೆ
ಕನ್ನಡಪ್ರಭ ವಾರ್ತೆ ಗೋಕರ್ಣಪ್ರವಾಸಿ ತಾಣದ ರಸ್ತೆ, ಕಡಲತೀರಗಳಲ್ಲಿನ ಸುರಕ್ಷತೆ ಹಾಗೂ ಸ್ವಚ್ಛತೆಯ ಕುರಿತು ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ ಪಿ. ಜಿಲ್ಲಾ ಮತ್ತು ತಾಲೂಕಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಮೀನುಗಾರರ ಯುನಿಯನ್ ಹಾಗೂ ರೆರ್ಸಾಟ್ ಪ್ರಮುಖರ ಸಭೆಯನ್ನ ಗ್ರಾಪಂ ಸಭಾಭವನದಲ್ಲಿ ಸೋಮವಾರ ನಡೆಸಿದರು.ಪಿಐ ಶ್ರೀಧರ ಮಾತನಾಡಿ, ಓಂ ಕಡಲತೀರದಲ್ಲಿ ವಾಹನ ನಿಲುಗಡೆಗೆ ಅರಣ್ಯ ಇಲಾಖೆಯ ಗ್ರಾಮ ಅರಣ್ಯ ಸಮಿತಿಯಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ವಾಹನ ನಿಲುಗಡೆಗೆ ಸರಿಯಾದ ಗುರುತು ಹಾಕಿ ಸರಿಯಾದ ಕ್ರಮದಲ್ಲಿ ವಾಹನ ನಿಲ್ಲಿಸುವಂತೆ ನೋಡಿಕೊಳ್ಳಬೇಕು, ಪ್ರಸ್ತುತ ಅಧಿಕ ಜನರು ಬಂದಾಗ ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಂತೆ ಕಡಲತೀರಕ್ಕೆ ಸಾಗುವಲ್ಲಿ ಮಣಿಸರ ಮಾರುವವರು ಕುಳಿತುಕೊಂಡು ವ್ಯಾಪಾರ ನಡೆಸುವುದರಿಂದ ಜನರಿಗೆ ಸಾಗಲು ತೊಂದರೆಯಾಗುತ್ತಿದೆ. ಇವರಿಗೆ ವ್ಯಾಪಾರ ನಡೆಸಲು ಸೂಕ್ತ ಸ್ಥಳಾವಕಾಶ ನೀಡಲು ನಿರ್ದೇಶಿಸಬೇಕು, ಕಡಲತೀರಕ್ಕೆ ತೆರಳುವಲ್ಲಿ ಗೇಟ್ ನಿರ್ಮಿಸಿ ಅಲ್ಲಿ ಸಿಸಿಕ್ಯಾಮೆರಾ ಅಳವಡಿಸಿದರೆ ನಿಗದಿ ಸಮಯ ಮುಗಿದ ಮೇಲೆ ಬಂದ್ ಮಾಡುವುದು ಹಾಗೂ ಇತರ ಚಟುವಟಿಕೆ ಮೇಲೆ ನಿಗಾಡಲು ಸಹಾಯವಾಗುತ್ತದೆ ಈ ಬಗ್ಗೆ ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ಮಾರ್ಗಸೂಚಿ ಫಲಕ ಅಳವಡಿಸಲು ಕೋರಿದರು. ಅಬಕಾರಿ ಇಲಾಖೆಯವರು ಮದ್ಯ, ಮಾದಕ ವಸ್ತುಗಳ ಬಳಕೆ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿದ್ದು ಇಲಾಖೆಯೊಂದಿಗೆ ಜೊತೆಗಿದ್ದು, ಸಹಕಾರ ನೀಡಲು ತಿಳಿಸಿದರು.ಲೋಕೋಪಯೋಗಿ ಇಲಾಖೆ ರಸ್ತೆಗಳ ಅಂಚು ಕಿತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನ ವಿವರಿಸಿ, ಹಲವು ಕಡೆ ರಸ್ತೆ ಹೊಂಡ ಮುಚ್ಚುವ ಕಾರ್ಯ ಮಾಡುತ್ತಿದ್ದು, ಇದೇ ರೀತಿ ಎಲ್ಲೆಡೆ ಸರಿಪಡಿಸಬೇಕು ಎಂದರು.ಗ್ರಾಪಂ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲಾ ಕಡಲತೀರದಲ್ಲಿ ಕ್ಯಾಮೆರಾ ಹಾಗೂ ಬೆಳಕಿನ ವ್ಯವಸ್ಥೆಗೆ ಕ್ರಮ ತೆಗೆದುಕೊಂಡರೆ ಸುರಕ್ಷತಾ ಕ್ರಮಕ್ಕೆ ಪೂರಕವಾಗುತ್ತದೆ ಎಂದರು.ಇದರಂತೆ ಚಾರಣಕ್ಕೆ ನಿಷೇಧಿಸಿದ ಅಪಾಯಕಾರಿ ಸ್ಥಳಕ್ಕೆ ತಾತ್ಕಾಲಿಕ ಬೇಲಿ ಹಾಕಲಾಗಿದ್ದು, ಇದನ್ನ ಅರಣ್ಯ ಇಲಾಖೆಯವರು ಶಾಶ್ವತ ಬಂದ್ ಮಾಡುವ ಕ್ರಮ ತೆಗೆದುಕೊಳ್ಳಬೇಕು. ಕಡಲತೀರದಲ್ಲಿ ಸಹ ಸುರಕ್ಷಿತ ಸ್ಥಳ ಗುರುತಿಸಿ, ಉಳಿದೆಡೆ ಅಪಾಯದ ಸ್ಥಳದ ಎಚ್ಚರಿಕೆ ನೀಡುವ ಮಾಹಿತಿ ಫಲಕ ಅಳವಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ರೆಸಾರ್ಟ್‌ನವರು ಸಹ ಹಲವು ಸಮಸ್ಯೆಯನ್ನು ಸಭೆಯ ಮುಂದಿಟ್ಟರು. ಉಪವಿಭಾಗಾಧಿಕಾರಿ ಮಾತನಾಡಿ, ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದ ನಿರ್ವಹಣೆಯನ್ನ ಇಲಾಖೆಯೇ ಮಾಡಬೇಕು. ಕಡಲತೀರ ಹಾಗೂ ಚಾರಣದ ಸ್ಥಳಗಳಲ್ಲಿನ ಸುರಕ್ಷತೆಯ ಬಗ್ಗೆ ತ್ವರಿತ ಕ್ರಮವಹಿಸಬೇಕು ಎಂದು ಸೂಚಿಸಿದರು.ಪ್ರವಾಸೋದ್ಯಮ ಇಲಾಖೆಯಿಂದ ಕಡಲತೀರದ ಸ್ವಚ್ಛತೆ ಹಾಗೂ ಪ್ರವಾಸಿತಾಣಕ್ಕೆ ಸಂಬಂಧಿಸಿದ ಇತರೆ ಕಾರ್ಯಚಟುವಟಿಕೆ ನಿಭಾಯಿಸುವುದು ಹಾಗೂ ನಿರಂತರ ನಿಗಾ ಇಡುವಂತೆ ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ದುರಸ್ತಿ ಹಾಗೂ ನಾಮಫಲಕ ಅಳವಡಿಸುವುದು ಸೇರಿದಂತೆ ಇಲಾಖೆ ಸಂಬಂಧಿಸಿದ ಕೆಲಸವನ್ನ ಪೂರ್ಣಗೊಳಿಸುವಂತೆ ತಿಳಿಸಿದರು.ಸ್ವಚ್ಛತೆ ನಿರ್ವಹಣೆಗಾಗಿ ವಿವಿಧೆಡೆ ಕಸದ ತೊಟ್ಟಿ ಇಡುವುದು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಕ್ರಮ ತೆಗೆದುಕೊಳ್ಳುವುದು ಹಾಗೂ ವಿಲೇವಾರಿ ಕುರಿತು ಹಲವು ಸಲಹೆ ನೀಡಿ ಎಲ್ಲವನ್ನ ಅನುಷ್ಠಾನಕ್ಕೆ ತರಲು ಗ್ರಾಪಂಗೆ ಸೂಚಿಸಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್, ಡಿವೈಎಸ್ಪಿ ಮಹೇಶ ಎಂ.ಕೆ., ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಎಲ್. ಭಟ್ ಉಪಸ್ಥಿತರಿದ್ದರು. ಕಂದಾಯ, ಅರಣ್ಯ, ಲೋಕೋಪಯೋಗಿ ಅಬಕಾರಿ, ಮೀನುಗಾರಿಕೆ ಬಂದರು, ಪ್ರವಾಸೋದ್ಯಮ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮೀನುಗಾರರ ಅಸೋಸಿಯೇಷನ್ ಹಾಗೂ ರೆಸಾರ್ಟ್ ಮಾಲೀಕರ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.
ಎಚ್ಚರಿಕೆ:ಅರಣ್ಯ ಇಲಾಖೆ ವ್ಯಾಪ್ತಿಯ ಜಾಗದಲ್ಲಿ ತ್ಯಾಜ್ಯದ ರಾಶಿ ಬಿದ್ದರೆ ಆ ಇಲಾಖೆಯೇ ಸ್ವಚ್ಛಗೊಳಿಸಬೇಕು. ಅದರಂತೆ ಪ್ರವಾಸೋದ್ಯಮ ಇಲಾಖೆಯವರು ಕಡಲತೀರದಲ್ಲಿನ ಕಸ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕು, ಕಂದಾಯ ಇಲಾಖೆಯ ಜಾಗದಲ್ಲಿ ಕಸದ ರಾಶಿ ಇದ್ದರೆ ಇದೇ ಇಲಾಖೆ ತೆಗೆದು ಸ್ವಚ್ಛಗೊಳಿಸಿ ಕಸ ಬೀಳದಂತೆ ನಿಗಾವಹಿಸಲು ಉಪವಿಭಾಗಾಧಿಕಾರಿ ಖಡಕ್ ಸೂಚನೆ ನೀಡಿದ್ದು, ಈ ಎಲ್ಲಾ ಕ್ರಮದ ಅನುಷ್ಠಾನದ ಕುರಿತು ಅನಿರೀಕ್ಷಿತ ಭೇಟಿ ಮಾಡಿ ಪರಿಶೀಲನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಎಲ್ಲರ ಸಭೆ ನಡೆಸಲು ಸೂಚನೆ:ಮುಖ್ಯರಸ್ತೆ ಅಂಚಿನಲ್ಲಿರುವ ಮೀನು ಮಾರುಕಟ್ಟೆಯನ್ನ ಸ್ಥಳಾಂತರಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ವಾಹನ ದಟ್ಟಣೆಯ ಜೊತೆ ಮೀನು ಮಾರಾಟಗಾರರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನ ವಿವರಿಸಲಾಗಿತ್ತು. ಇದಕ್ಕೆ ಸ್ಪಂದಿಸಿ ಉಪವಿಭಾಗಧಿಕಾರಿಯವರು, ಮೀನು ಮಾರಾಟ ಮಾಡುವವರು ಸೇರಿದಂತೆ ಎಲ್ಲರ ಸಭೆ ನಡೆಸಿ ಅವರ ಅಹವಾಲು ಆಲಿಸಿ ಸೂಕ್ತ ಕ್ರಮತೆಗೆದುಕೊಳ್ಳಲು ಸೂಚಿಸಿದ್ದು, ಈ ಬಗ್ಗೆ ತ್ವರಿತವಾಗಿ ಸಭೆ ನಡೆಸಲು ಸೂಚಿಸಿದರು.