ಮಳವಳ್ಳಿ ತಾಲೂಕು ವ್ಯಾಪ್ತಿ ಹಸಿರು ವಲಯ ನಿರ್ಮಿಸಲು ಕ್ರಮ ವಹಿಸಿ: ಎಸ್.ಧನುಷ್

KannadaprabhaNewsNetwork |  
Published : Oct 09, 2026, 01:45 AM IST
8ಕೆಎಂಎನ್ ಡಿ21 | Kannada Prabha

ಸಾರಾಂಶ

ಬಾಲ್ಯವಿವಾಹ ಕಂಡು ಬಂದರೆ ಕಾನೂನು ಕ್ರಮ ವಹಿಸಿ ಬಾಲ್ಯವಿವಾಹ ಸಂಪೂರ್ಣ ನಿರ್ಮೂಲನೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಟ್ಟಡಗಳ ದುರಸ್ತಿ ತ್ವರಿತಗತಿಯನ್ನು ಮುಗಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನಾದ್ಯಂತ ಕೆರೆ, ಕಟ್ಟೆ, ಕಾಲುವೆ, ರಸ್ತೆ ಬದಿ ಸೇರಿದಂತೆ ಖಾಲಿ ಜಾಗಗಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸಿ ಹಸಿರು ವಲಯವನ್ನು ನಿರ್ಮಿಸಲು ಕಾರ್ಯ ಪ್ರವೃತ್ತರಾಗುವಂತೆ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಎಸ್.ಧನುಷ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವಮಾನ ವೈಪರೀತ್ಯ ಹೆಚ್ಚಾಗಿ ಮಳೆಬೆಳೆ ಇಲ್ಲದೇ ಸಂಕಷ್ಟ ಪಡುವಂತಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಗಿಡನೆಡುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು.

ವಿವಿಧ ಇಲಾಖೆ ಅಧಿಕಾರಿಗಳು ಶಾಲೆ, ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಮಕ್ಕಳೊಂದಿಗೆ ಆಹಾರ ಸೇವಿಸಬೇಕು , ಪಠ್ಯಕ್ರಮಗಳು ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಗ್ರಾಮೀಣ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ನಿಯಂತ್ರಿಸಲು ಸರ್ಕಾರಿ ನಿಮಯಗಳನ್ನು ಪಾಲಿಸುವ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರಚಾರ ಕೈಗೊಂಡು ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಬಾಲ್ಯವಿವಾಹ ಕಂಡು ಬಂದರೆ ಕಾನೂನು ಕ್ರಮ ವಹಿಸಿ ಬಾಲ್ಯವಿವಾಹ ಸಂಪೂರ್ಣ ನಿರ್ಮೂಲನೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಟ್ಟಡಗಳ ದುರಸ್ತಿ ತ್ವರಿತಗತಿಯನ್ನು ಮುಗಿಸಬೇಕು ಎಂದು ಸಿಡಿಪಿಓ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಸುಗಳಿಗೆ ಕಾಲುಬಾಯಿ ಜ್ವರ, ಗಂಟು ರೋಗ ಸೇರಿದಂತೆ ಇತರೆ ರೋಗ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಔಷಧವನ್ನು ಹಸುಗಳಿಗೆ ನೀಡಬೇಕು. ಪಶು ಇಲಾಖೆಯಲ್ಲಿ ಎಲ್ಲಾ ರೀತಿ ಔಷಧಗಳು ಸಿಗುವಂತಾಗಬೇಕು ಎಂದರು.

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಕಾರ್ಯವನ್ನು ಬೇಗ ಪೂರ್ಣಗೊಳಿಸಬೇಕು. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಬೇಕಾದ ಸೌಲಭ್ಯ, ಸರ್ಕಾರದ ಸವಲತ್ತುಗಳು ಜನರಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.

ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಈಗಾಗಲೇ ಅನುದಾನವನ್ನು ಕಾಯ್ದಿರಿಸಲಾಗಿದೆ. ಪಶು ಇಲಾಖೆ ಅಧಿಕಾರಿಗಳು ಜಾಗ ಗುರುತಿಸಬೇಕು. ಅವುಗಳಿಗೆ ಮೂಲ ಸೌಕರ್ಯ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್ ಮಾತನಾಡಿ, ಈ ವರ್ಷ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಗಳ ಬಿತ್ತನೆ ಪ್ರಮಾಣ ಸಾಕಷ್ಟು ಕುಸಿದಿದೆ. ನೀರಿನ ಕೊರತೆಯಿಂದಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಬಿತ್ತನೆ ಕಾರ್ಯ ನಡೆದಿಲ್ಲ. 14819 ಮಂದಿ ರೈತರು ವಿಮೆ ಸೌಲಭ್ಯಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಕೊರತೆಯಾಗದಂತೆ ಜಾಗೃತಿ ವಹಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರೂಣಪತ್ತೆ ನಡೆಸುವ ಸ್ಕ್ಯಾನಿಂಗ್‌ ಸೆಂಟರ್‌ಗಳ ವಿರುದ್ಧ ಕ್ರಮ ಜರುಗಿಸಿ
ನೆಲ-ಜಲ ರಕ್ಷಣೆ, ಒತ್ತುವರಿ ತೆರವು, ಪಹಣಿ ಇಂಡೀಕರಣ ತ್ವರಿತಗೊಳಿಸಿ