ಬಳ್ಳಾರಿ: ಜಿಲ್ಲೆಯಲ್ಲಿ ಹಲವೆಡೆ ಮಕ್ಕಳು ಕಾಣೆಯಾದ ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ಜಿಲ್ಲೆಯಲ್ಲಿ ಅಪಹರಣ, ಕಾಣೆಯಾದ ಮಕ್ಕಳ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಪರಿಶೀಲನೆ ನಡೆಸಲಾಗುತ್ತಿದೆ. ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪ್ರತಿ ಮಾಹೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಕಾಣೆಯಾದ, ಪತ್ತೆಯಾಗದ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಂಡು ವರದಿ ನೀಡಬೇಕು ಎಂದರು.
ಹಲವಾರು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನು ಪರಿಹರಿಸಲು ವಿವಿಧ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ, ಜಿಲ್ಲಾ ಮಟ್ಟದ ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು.ಜಿಲ್ಲೆಯಲ್ಲಿ ಕಾಣೆಯಾದ ಮಕ್ಕಳ ಮನೆ ಭೇಟಿ ನೀಡಿ ಪ್ರಸ್ತುತ ವಸ್ತುಸ್ಥಿತಿಗಳ ಕುರಿತು ಮಾಹಿತಿ ಪಡೆಯಬೇಕು. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಭೆ ಹಮ್ಮಿಕೊಂಡು ಆ ಸಭೆಯಲ್ಲಿ ಕಾಣೆಯಾದ ಮಕ್ಕಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಿಂದ ತೆರೆದ ಮನೆ ಕಾರ್ಯಕ್ರಮವನ್ನು ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಮಕ್ಕಳು ಕಾಣೆಯಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ 112 ಕರೆ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಬಾಲ್ಯವಿವಾಹ ನಿಷೇಧ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಕೃಷ್ಣಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಗೌಸಿಯಾ, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳಾದ ರೇಷ್ಮಾ, ಮಾರುತಿ, ರೀಡ್ಸ್ ಸಂಸ್ಥೆಯ ತಿಪ್ಪೇಸ್ವಾಮಿ, ರೀಚ್ ಸಂಸ್ಥೆಯ ಹನುಮಂತಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನುರಪ್ಪ, ಮೋಹನ್ ರೆಡ್ಡಿ, ಮಂಜುನಾಥ ಇದ್ದರು.