‘ಸರ್ಕಾರಿ ಜಮೀನಿದ್ದಲ್ಲಿ ಸ್ವಾಧೀನಕ್ಕೆ ಜರೂರು ಕ್ರಮ ವಹಿಸಿ’

KannadaprabhaNewsNetwork |  
Published : Jan 15, 2026, 01:30 AM IST
೧೪ಕೆಎಂಎನ್‌ಡಿ-೪ವಾಣಿಜ್ಯ ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎ.ಎಸ್.ಗಣೇಶ್ ಅವರು ಕೆಐಎಡಿಬಿ ಸಿಇಓಗೆ ಪತ್ರ. | Kannada Prabha

ಸಾರಾಂಶ

ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್‌ನ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ನೂರು ಎಕರೆಗಿಂತಲೂ ಹೆಚ್ಚಿನ ಸರ್ಕಾರಿ ಜಾಗ ಲಭ್ಯವಿರುವುದಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಕೆಐಎಡಿಬಿ ಸಿಇಒ ಅವರಿಗೆ ಪತ್ರ ರವಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್‌ನ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ನೂರು ಎಕರೆಗಿಂತಲೂ ಹೆಚ್ಚಿನ ಸರ್ಕಾರಿ ಜಾಗ ಲಭ್ಯವಿರುವುದಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಕೆಐಎಡಿಬಿ ಸಿಇಒ ಅವರಿಗೆ ಪತ್ರ ರವಾನಿಸಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ೧೦೦ ಎಕರೆ ಬಯಲು ಭೂಮಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಯೂನಿಟ್ ಸ್ಥಾಪನೆಗೆ ಸಿದ್ಧಪಡಿಸಿದ ಕೈಗಾರಿಕಾ ಭೂಮಿ ಲಭ್ಯವಿಲ್ಲವೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ತಿಳಿಸಿದ್ದರು.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರ ಪತ್ರವನ್ನು ಉಲ್ಲೇಖಿಸಿ ಕೆಐಎಡಿಬಿ ಸಿಇಒ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ರವಾನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಎ.ಎಸ್.ಗಣೇಶ್ ಅವರು ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸರ್ಕಾರಿ ಭೂಮಿ ಲಭ್ಯವಿದ್ದರೆ ಸ್ವಾಧೀನಕ್ಕೆ ಜರೂರು ಕ್ರಮ ವಹಿಸುವಂತೆ ಕೆಐಎಡಿಬಿ ಸಿಇಒ ಅವರಿಗೆ ಪತ್ರ ಮೂಲಕ ಸೂಚಿಸಿದ್ದಾರೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದ ಸರ್ವೇ ನಂ. ೮೧ರ ಸರ್ಕಾರಿ ಗೋಮಾಳದಲ್ಲಿ ಆಕಾರ್‌ಬಂದ್‌ನಂತೆ ೧೧೦ ಎಕರೆ ೯ ಗುಂಟೆ ಖರಾಬು ಜಮೀನಿದೆ. ಆರ್‌ಟಿಸಿಯಂತೆ ೧೧೪-೨೧ ಎಕರೆ ಜಮೀನಿದ್ದು ೧೦೯.೩೧ ಗುಂಟೆ ಜಮೀನು ಇದೆ ಎಂದು ಮಾಹಿತಿ ರವಾನಿಸಿದ್ದಾರೆ.

ಈ ಜಮೀನಿನಲ್ಲಿ ೨೦೦೫-೦೬ನೇ ಸಾಲಿನಲ್ಲಿ ಅರಣ್ಯ ಇಲಾಖೆಯಿಂದ ೫ ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದೆ. ಅಲ್ಲದೆ, ಈ ಸರ್ಕಾರಿ ಜಮೀನಿಗೆ ಹೊಂದಿಕೊಂಡಂತೆ ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಿಹಳ್ಳಿ-೨ರ ಹೋಬಳಿ ಸಿದ್ದಾಪುರ ಗ್ರಾಮದ ಸರ್ವೇ ನಂ.೯೩ರಲ್ಲಿ ೨೮ ಎಕರೆಗಿಂತಲೂ ಹೆಚ್ಚಿನ ಸರ್ಕಾರಿ ಹುಲ್ಲುಬನ್ನಿ ಜಮೀನಿದ್ದು ಅದರಲ್ಲಿ ೩ ಎಕರೆ ಶ್ರೀರಂಗಪಟ್ಟಣ ತಾಲೂಕು ಪಂಚಾಯ್ತಿ ಹಾಗೂ ಆರಕ್ಷಕ ಇಲಾಖೆಗೆ ೧ ಎಕರೆ ಭೂ ಮಂಜೂರಾತಿಯಾಗಿದೆ. ಉಳಿಕೆ ೧೯ ಎಕರೆ ೨೪ ಗುಂಟೆ ಲಭ್ಯವಿರುವುದಾಗಿ ವಿವರಿಸಿದ್ದರು.

ಈ ಎರಡೂ ಸರ್ವೆ ನಂಬರ್‌ಗಳ ಸರ್ಕಾರಿ ಜಮೀನುಗಳು ಬಿ-ಖರಾಬಿನಲ್ಲಿ ದಾಖಲಾಗಿದ್ದು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಮೈಸೂರು ವಿಮಾನ ನಿಲ್ದಾಣ, ಹೆದ್ದಾರಿಯ ಟೋಲ್, ವಿದ್ಯುಚ್ಛಕ್ತಿ, ಕಾವೇರಿ ನೀರಿನ ವ್ಯವಸ್ಥೆ ಇದೆ ಎಂದು ಗಮನಕ್ಕೆ ತಂದಿದ್ದರು. ಇವೆಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಸೆಮಿಕಂಡಕ್ಟರ್ ಯೋಜನೆಗೆ ಸರ್ಕಾರಿ ಭೂಮಿ ಖಾಲಿ ಇದ್ದರೆ ತ್ವರಿತವಾಗಿ ಸ್ವಾಧೀನಕ್ಕೆ ಕ್ರಮ ವಹಿಸುವಂತೆ ಹಸಿರು ನಿಶಾನೆ ತೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ