ಜಂತುಹುಳು ನಿವಾರಣೆಗೆ ಅಗತ್ಯ ಕ್ರಮವಹಿಸಿ: ಎಚ್. ಎಸ್ ಕೀರ್ತನಾ

KannadaprabhaNewsNetwork | Published : Dec 8, 2024 1:17 AM

ಸಾರಾಂಶ

ಚಿಕ್ಕಮಗಳೂರು, ಮಕ್ಕಳು ಪೌಷ್ಠಿಕವಾಗಿ ಬೆಳವಣಿಗೆ ಹೊಂದಲು ಅಡ್ಡಿಯಾಗಿರುವ ಜಂತುಹುಳು ನಿವಾರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಹೇಳಿದ್ದಾರೆ.

- ರಾಷ್ಟ್ರೀಯ ಜಂತುಹುಳು ನಿವಾರಣಾ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳು ಪೌಷ್ಠಿಕವಾಗಿ ಬೆಳವಣಿಗೆ ಹೊಂದಲು ಅಡ್ಡಿಯಾಗಿರುವ ಜಂತುಹುಳು ನಿವಾರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಹೇಳಿದ್ದಾರೆ.ಜಿಲ್ಲಾ ಪಂಚಾಯಿತಿ ಕಚೇರಿ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಆರೋಗ್ಯಯುತವಾಗಿ ಮತ್ತು ಸದೃಢ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಊಟ, ಉಪಹಾರ ದೊಂದಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿಯಂತಹ ಪೌಷ್ಠಿಕಾಂಶದ ಪೂರಕ ಆಹಾರ ಒದಗಿಸುತ್ತಿದೆ. ಮಣ್ಣು ಹಾಗೂ ಇತರೆ ಅಂಶಗಳ ಮೂಲಕ ಹರಡಲ್ಪಡುವ ಜಂತುಹುಳು ಮಕ್ಕಳ ಅಪೌಷ್ಠಿಕತೆಗೆ ಕಾರಣವಾಗಲಿದೆ. ಆದ್ದರಿಂದ ಶಾಲಾ, ಕಾಲೇಜು, ಅಂಗನವಾಡಿಯಲ್ಲಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಿ ಮಕ್ಕಳು ಆರೋಗ್ಯ ದಿಂದ ಬೆಳವಣಿಗೆ ಹೊಂದಲು ಪ್ರತಿಯೊಬ್ಬರು ಸಹಕರಿಸಬೇಕು ಎಂದರು.ಜಂತುಹುಳು ಸೋಂಕು ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಾರಣವಾಗಿದೆ. ಸೋಂಕಿತ ಮಕ್ಕಳು ಹೆಚ್ಚು ದಣಿದಂತಿರುತ್ತಾರೆ. ಇವುಗಳಿಂದ ಮಕ್ಕಳು ಶಾಲೆಗೆ ಗೈರು ಹಾಜರಾಗುವುದಲ್ಲದೇ ಆಟ, ಪಾಠ ಹಾಗೂ ಇತರೇ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಜಂತುಹುಳು ಬಾಧೆಯಿಂದ ವ್ಯಕ್ತಿಯ ದೈಹಿಕ ಮತ್ತು ಭೌದ್ಧಿಕ ಸಾಮಾರ್ಥ್ಯ ಕುಗ್ಗಿ ಆರ್ಥಿಕ ಪ್ರಗತಿಗೂ ಅಡ್ಡಿಯಾಗಲಿದೆ. ಜಿಲ್ಲೆ ಯಲ್ಲಿರುವ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಲ್ಬೆಂಡಝೋಲ್ ಮಾತ್ರೆ ನೀಡಿ ಜಂತುಹುಳು ನಿವಾರಣೆ ಮಾಡಬೇಕು. ಮಾತ್ರೆಯನ್ನು ನಿಧಾನವಾಗಿ ಚೀಪುವ ಮೂಲಕ ಸೇವಿಸುವ ವಿಧಾನವಾಗಿದ್ದು ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಕುರಿತು ತರಬೇತಿ ಹಾಗೂ ಮಾಹಿತಿ ನೀಡಬೇಕು ಎಂದ ಅವರು, ಅತ್ಯಂತ ಕಿರಿಯ ಮಕ್ಕಳಿಗೆ ಚಮಚ ಬಳಸಿ ಮಾತ್ರೆಗಳನ್ನು ನೀಡುವಂತೆ ಸೂಚಿಸಿದರು.ಆಶಾ ಕಾರ್ಯಕರ್ತೆಯರು ಅಂಗನವಾಡಿಗೆ ದಾಖಲಾಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಮಾಡಿ ಅಂತಹ ಮಕ್ಕಳ ಮನೆಗೆ ತೆರಳಿ ಮಾತ್ರೆಗಳನ್ನು ವಿತರಿಸಬೇಕು. ಅಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲೆ, ಅಂಗನವಾಡಿಗಳಿಗೆ ಬೇಕಾಗುವ ಅಗತ್ಯ ಮಾತ್ರೆಗಳನ್ನು ತಲುಪಿಸಿ ವಿತರಣೆ ಹಾಗೂ ನಿರ್ವಹಣೆ ಸಮರ್ಪಕವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು ಎಂದ ಅವರು, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಪ್ರತಿಯೊಬ್ಬರಿಗೂ ಮಾತ್ರೆ ತಲುಪಿಸಬೇಕೆಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ ಬಾಬು ಮಾತನಾಡಿ, ಜಿಲ್ಲೆಯಲ್ಲಿ 1 ರಿಂದ 19 ವರ್ಷ ದೊಳಗಿನ ಒಟ್ಟು 2,31,930 ಮಕ್ಕಳಿದ್ದಾರೆ. ಇವರಲ್ಲಿ 63,753 ಮಕ್ಕಳು 1 ರಿಂದ 5 ವರ್ಷ ಹಾಗೂ 1,68,177 ಮಕ್ಕಳು 6 ರಿಂದ 19 ವರ್ಷದವರಾಗಿದ್ದಾರೆ. ಪ್ರತಿ ಮಕ್ಕಳಿಗೂ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಉದ್ದೇಶದಿಂದ ಕಸ ಸಂಗ್ರಹಣ ವಾಹನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರ ಅಂಟಿಸಿ ಜಂತುಹುಳು ನಿವಾರಣೆ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಾತ್ರೆಗಳನ್ನು ಸೇವಿಸುವ ವಿಧಾನದ ಕುರಿತು ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ ಎಂದರು.

ಸಭೆಯಲ್ಲಿ ಆರ್‌ಸಿಹೆಚ್‌ಒ ಡಾ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ, ಶಶಿಕಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಹರೀಶ್ ಬಾಬು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.7 ಕೆಸಿಕೆಎಂ 5ಜಿಲ್ಲಾ ಪಂಚಾಯಿತಿ ಕಚೇರಿ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಕೀರ್ತನಾ ಜಂತು ಹುಳು ನಿವಾರಣಾ ಭಿತ್ತಿಪತ್ರ ಬಿಡುಗಡೆ ಮಾಡಿದರು. ಡಾ. ಅಶ್ವತ್‌ ಬಾಬು, ಡಾ. ಮಂಜುನಾಥ್‌, ಡಾ. ಹರೀಶ್‌ಬಾಬು, ಡಾ. ಶಶಿಕಲಾ ಇದ್ದರು.

Share this article