ಮಂಡ್ಯ ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಿ: ಡಾ.ಕುಮಾರ

KannadaprabhaNewsNetwork |  
Published : Oct 30, 2025, 01:45 AM IST
27ಕೆಎಂಎನ್ ಡಿ11 | Kannada Prabha

ಸಾರಾಂಶ

ಪ್ರಸ್ತುತ ಜಿಲ್ಲೆಯಲ್ಲಿ 710 ರೋಗಿಗಳು ಕ್ಷಯ ರೋಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ಷಯ ರೋಗಗಳ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2015ರ ಕ್ಷಯ ರೋಗದ ಪ್ರಮಾಣವನ್ನು 2022ಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಟಿ.ಬಿ.ಫೋರಂ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷಯ ರೋಗ ಲಕ್ಷಣಗಳು ಕಂಡು ಬರುವ ಮಧುಮೇಹಿಗಳು, ಧೂಮಪಾನಿಗಳು, ಕ್ಯಾನ್ಸರ್ ಪೀಡಿತರು, ಸಕ್ಕರೆ ಕಾಯಿಲೆ ರೋಗಿಗಳು, ವೃದ್ಧರು, ಮಕ್ಕಳು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 710 ರೋಗಿಗಳು ಕ್ಷಯ ರೋಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ಷಯ ರೋಗಗಳ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2015ರ ಕ್ಷಯ ರೋಗದ ಪ್ರಮಾಣವನ್ನು 2022ಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದೆ ಎಂದರು.

2022ರಲ್ಲಿ ಕೇಂದ್ರ ಕ್ಷಯರೋಗ ವಿಭಾಗ ಜಿಲ್ಲೆಗೆ ಕಂಚಿನ ಪದಕ ನೀಡಿ ಗೌರವಿಸಿದೆ. ಜಿಲ್ಲೆಯಲ್ಲಿ 4 CBNAAT (ಕಾರ್ಟ್ರಿಡ್ಜ್-ಆಧಾರಿತ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ) ಮೆಷೀನ್ ಗಳು ಇದೆ. ಕ್ಷಯ ರೋಗ ಲಕ್ಷಣ ಇರುವ ವ್ಯಕ್ತಿಯ ಎಂಜಲಿನಿಂದ ಕೇವಲ 2 ಗಂಟೆಗಳಲ್ಲಿ ಕ್ಷಯ ರೋಗವನ್ನು ಪತ್ತೆ ಹಚ್ಚಬಲ್ಲದು ಎಂದರು.

ಕ್ಷಯ ರೋಗ ದೃಡಪಟ್ಟ ರೋಗಿಗಳಿಗೆ 6 ತಿಂಗಳ ಕಾಲ ಆಶಾ ಕಾರ್ಯಕರ್ತೆಯರಿಂದ ಉಚಿತ ಔಷಧಿ ಒದಗಿಸಲಾಗುವುದು ಹಾಗೂ ಮಾತ್ರೆಯನ್ನು ಸೇವನೆ ಮಾಡಿಸಲಾಗುವುದು. ಔಷಧಿಗಳು ಕನಿಷ್ಠ 10 ದಿನಗಳ ಸೇವನೆಯಿಂದ ಕ್ಷಯ ರೋಗ ಇತರರಿಗೆ ಹರಡದಂತೆ ತಡೆಯಬಹುದು. ಕ್ಷಯ ರೋಗಿಗಳು ವೆಂಟಿಲೇಷನ್ ನಲ್ಲಿ ಇರಬೇಕು ಹಾಗೂ ಮಾಸ್ಕ್ ಧರಿ‌ಸಬೇಕು. ಪೌಷ್ಟಿಕತೆಗಾಗಿ ಕೇಂದ್ರ ಸರ್ಕಾರದ ನಿಕ್ಷಯ್ ಪೋಷಣಾ ಯೋಜನೆಯಡಿ ಕ್ಷಯ ರೋಗಿಗಳಿಗೆ ಪ್ರತಿ ಮಾಹೆ 1000 ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರತಿ ವರ್ಷ ಟಿ.ಬಿ.ಮುಕ್ತ ಗ್ರಾಪಂಗಳನ್ನು ಘೋಷಣೆ ಮಾಡಬೇಕು, ಟಿ.ಬಿ.ಪ್ರಕರಣಗಳು ಕಡಿಮೆ ಹಾಗೂ ಅರ್ಹ ಮಾನದಂಡ ಇರುವ ಗ್ರಾಪಂಗಳನ್ನು ಟಿ.ಬಿ ಮುಕ್ತ ಗ್ರಾಮ ಪಂಚಾಯ್ತಿ ಎಂದು ಘೋಷಿಸಲಾಗುವುದು. 2023ರಲ್ಲಿ 16 ಗ್ರಾಮ ಪಂಚಾಯ್ತಿ, 2024 ರಲ್ಲಿ 41 ಗ್ರಾಮ ಪಂಚಾಯ್ತಿ ಹಾಗೂ ಸದರಿ ವರ್ಷ ಅಂದಾಜು 67 ಗ್ರಾಮ ಪಂಚಾಯ್ತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯ್ತಿಗಳು ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಚಿಕಿತ್ಸೆ ಪಡೆದು ಕ್ಷಯ ರೋಗದಿಂದ ಮುಕ್ತಗೊಂಡಿರುವ ವ್ಯಕ್ತಿಗಳ ಮೂಲಕ ಕ್ಷಯ ರೋಗಿಗಳಿಗೆ ಜಾಗೃತಿ ಮೂಡಿಸಿ ಔಷಧಿಗಳನ್ನು ಎಸೆಯದೆ ಸೇವನೆ ಮಾಡುವಂತೆ ಸೂಚಿಸಿ, ಸಾಮಾಜಿಕ ಜಾಲತಾಣಗಳಲ್ಲೂ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ಟಿ.ಬಿ.ಪರೀಕ್ಷೆ ಮಾಡುವಾಗ ರೋಗಿಗಳ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ಶಾಲಾ ಮಕ್ಕಳಿಂದ ಕ್ಷಯ ರೋಗ ಜಾಗೃತಿ ಮೂಡಿಸಬೇಕು. ಕೊಳಚೆ ಪ್ರದೇಶಗಳಲ್ಲಿ ಕ್ಷಯ ರೋಗದ ಕುರಿತಾಗಿ ಅರಿವು ಮೂಡಿಸಿ ಟಿ.ಬಿ ಮುಕ್ತ ತಾಲೂಕು ಮಾಡಲು ಕ್ರಮ ವಹಿಸಿ ಎಂದು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತ, ಆರ್ ಸಿಎಚ್ ಅಧಿಕಾರಿ ಡಾ.ಅಶ್ವತ್ಥ್ , ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು