ಕುಡಿವ ನೀರು ಸಮಸ್ಯೆಯಾಗದಂತೆ ಮುಂಜಾಗೃತ ಕ್ರಮ ವಹಿಸಿ: ಇ.ಬಾಲಕೃಷ್ಣ

KannadaprabhaNewsNetwork |  
Published : Feb 27, 2024, 01:31 AM IST
ಹರಿಹರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಸ್ತುವಾರಿ ಕಾರ್ಯದರ್ಶಿಗಳಾದ ಇ. ಬಾಲಕೃಷ್ಣ. | Kannada Prabha

ಸಾರಾಂಶ

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಲಭ್ಯ ಇರುವ ಖಾಸಗಿ ಬೋರ್ ವೆಲ್ ಮಾಲೀಕರಿಂದ ತಿಂಗಳಿಗೆ ₹೧೫ ಸಾವಿರದಂತೆ ಬಾಡಿಗೆ ಪಡೆದು ನೀರುಣಿಸಬೇಕು ಹಾಗೂ ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು.

ಕನ್ನಡಪ್ರಭ ವಾರ್ತೆ ಹರಿಹರ

ಬರ ಪೀಡಿತ ತಾಲೂಕು ಎಂದು ಈಗಾಗಲೇ ಘೋಷಿಸಿದ್ದು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗೃತ ಕ್ರಮ ಕೈಗೊಳ್ಳಲು ಸಿದ್ಧರಿರಬೇಕು ಎಂದು ಅಧಿಕಾರಿಗಳಿಗೆ ತಾಲೂಕು ಉಸ್ತುವಾರಿ ಕಾರ್ಯದರ್ಶಿ ಇ.ಬಾಲಕೃಷ್ಣ ತಾಕೀತು ಮಾಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಲಭ್ಯ ಇರುವ ಖಾಸಗಿ ಬೋರ್ ವೆಲ್ ಮಾಲೀಕರಿಂದ ತಿಂಗಳಿಗೆ ₹೧೫ ಸಾವಿರದಂತೆ ಬಾಡಿಗೆ ಪಡೆದು ನೀರುಣಿಸಬೇಕು ಹಾಗೂ ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು ಎಂದರು.

ಈಗಾಗಲೇ ಕಡರನಾಯಕನಹಳ್ಳಿ ಮಿಟ್ಲಕಟ್ಟೆ, ದೇವರಬೆಳೆಕೆರೆ, ಹರಳಹಳ್ಳಿ, ಕೊಕ್ಕನೂರು, ರಾಮತೀರ್ಥ, ಕುಣೆಬೆಳೆಕೆರೆ, ಜಿ.ಬೇವಿನಹಳ್ಳಿ, ಜಿಗಳಿ ಗ್ರಾಮಗಳು ಸೇರಿ ಇತರೆ ಹಳ್ಳಿಗಳಲ್ಲಿ ಖಾಸಗಿ ಕೊಳವೇಬಾವಿ ಮಾಲಿಕರಿಂದ ಬಾಡಿಗೆ ಪಡೆದು ನೀರನ್ನು ಪೂರೈಸಬೇಕೇ ವಿನಾ ಸರ್ಕಾರದ ನಿಯಮ ಮೀರಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾ.೩೧ ರಾಗಿ ಖರೀದಿ ಕೇಂದ್ರದಲ್ಲಿ ರೈತರು ನೋಂದಾಯಿಸಲು ಕೊನೆ ದಿನ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಕೃಷಿ ಇಲಾಖೆ ಅಧಿಕಾರಿಗಳು ಮಾತನಾಡಿ, ತಾಲೂಕಿನಲ್ಲಿ ಬರ ಹಾಗೂ ಭದ್ರಾ ನಾಲೆಯಲ್ಲಿ ನೀರಿನ ಹರಿವು ಇಲ್ಲದೇ ಇರುವ ಕಾರಣ ರೈತರು ಭತ್ತ ನಾಟಿ ಮಾಡಿಲ್ಲ. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದರು.

ಬಿಇಒ ಹನುಮಂತಪ್ಪ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ವ್ಯಕ್ತಿತ್ವ ವಿಕಸನ ಶಿಬಿರ ಸೇರಿ ಹಲವು ಚಟುವಟಿಕೆಗಳ ಮಾಡಲಾಗುತ್ತಿದೆ. ನಮ್ಮ ತಾಲೂಕು ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಗುರಿ ಹೊಂದಿದೆ ಎಂದರು.

ಅಕ್ಷರ ದಾಸೋಹ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ಬರಗಾಲ ಇರುವುದರಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ೪೧ ದಿನ ಕಾಲ ಬಿಸಿಯೂಟವನ್ನು ನೀಡಲು ಸರ್ಕಾರ ಆದೇಶಿಸಿದ್ದು ಈಗಾಗಲೇ ತಾಲೂಕಿನಲ್ಲಿ ಏಳು ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಎಂದರು. ಹರಿಹರ ನಗರಸಭೆ ಕಸ ಸಂಗ್ರಹ ಘಟಕದಲ್ಲಿ ಸಾರ್ಮರ್ಥ್ಯ ಮೀರಿ ತ್ಯಾಜ್ಯ ಹಾಕುತ್ತಿರುವ ಪರಿಣಾಮ ಸುತ್ತಮುತ್ತಲಿನ ರೈತರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಪೌರಾಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಸದ ರಾಶಿ ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಎಇಇ ತಿಪ್ಪೇಶಪ್ಪಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಗುರುಬಸವರಾಜ್, ತಾ.ಪಂ ಇಒ ರಮೇಶ್ ಸುಲ್ಫಿ, ಸಿಡಿಪಿಒ ಪೂರ್ಣಿಮಾ, ಅರಣ್ಯ ಇಲಾಖೆಯ ಅಮೃತಾ, ಪಿಆರ್‌ಇ ಜೆಇ ಯತಿರಾಜ್, ಪ್ರಭಾರಿ ಟಿಎಚ್‌ಒ ಪ್ರಶಾಂತ್, ಪ್ರಭಾರ ಟಿಪಿಒ ಪೂಜಾ, ಸ್ವಪ್ನಾ, ಕೆ.ಎನ್.ಲಿಂಗರಾಜ್ ಸೇರಿ ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

,,,,,,,,,,,,,,,,,,

PREV

Recommended Stories

ಅನನ್ಯಾ ಭಟ್‌ ಅರವಿಂದ್‌-ವಿಮಲಾ ಪುತ್ರಿ, ಕೊ* ಆಗಿದ್ದು ನಿಜ: ಸುಜಾತಾ
ಬುಕರ್‌ ವಿಜೇತ ಬಾನುರಿಂದ ದಸರಾ ಉದ್ಘಾಟನೆ: ಸಿಎಂ