ಹವಾಮಾನ ವೈಪರೀತ್ಯ ಮುನ್ನೆಚ್ಚರ ವಹಿಸಿ: ಹರ್ಷಲ್ ಗೋಯಲ್

KannadaprabhaNewsNetwork |  
Published : Dec 04, 2024, 12:31 AM IST
ಚಿತ್ರ : 3ಎಂಡಿಕೆ1 : ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನಿರ್ದೇಶಕರಾದ ಹರ್ಷಲ್ ಗೋಯಲ್ ಮಾತನಾಡಿದರು.  | Kannada Prabha

ಸಾರಾಂಶ

ಹವಾಮಾನ ವೈಪರೀತ್ಯ ಸಂಬಂಧ ಮುನ್ನೆಚ್ಚರ ವಹಿಸಿದಲ್ಲಿ ಹಲವು ಅವಘಡಗಳನ್ನು ತಪ್ಪಿಸಬಹುದಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರವು ಕಾಲ ಕಾಲಕ್ಕೆ ಹೊರಡಿಸುವ ಮಾಹಿತಿ ಹಂಚಿಕೊಳ್ಳುವಂತೆ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನಿರ್ದೇಶಕ ಹರ್ಷಲ್ ಗೋಯಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹವಾಮಾನ ವೈಪರೀತ್ಯ ಸಂಬಂಧ ಮುನ್ನೆಚ್ಚರ ವಹಿಸಿದಲ್ಲಿ ಹಲವು ಅವಘಡಗಳನ್ನು ತಪ್ಪಿಸಬಹುದಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರವು ಕಾಲ ಕಾಲಕ್ಕೆ ಹೊರಡಿಸುವ ಮಾಹಿತಿ ಹಂಚಿಕೊಳ್ಳುವಂತೆ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನಿರ್ದೇಶಕ ಹರ್ಷಲ್ ಗೋಯಲ್ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ದಲ್ಲಿ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿ ಅವರು ಮಾತನಾಡಿದರು.

ಪ್ರಾಕೃತಿಕ ವಿಕೋಪ ಯಾವುದೇ ಸಂದರ್ಭದಲ್ಲಿಯೂ ಎದುರಾಗಬಹುದಾಗಿದ್ದು, ಆದ್ದರಿಂದ ಸದಾ ಮುನ್ನೆಚ್ಚರ ವಹಿಸುವುದು ಅತ್ಯಗತ್ಯ ಎಂದರು.

ಹವಾಮಾನ ಮುನ್ಸೂಚನೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಕೃಷಿಕರು, ಸ್ಥಳೀಯರಿಗೆ, ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು, ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹವಾಮಾನ ಮುನ್ಸೂಚನೆ ನೀಡುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಹೊರಡಿಸುವ ಮಾಹಿತಿ ಎಲ್ಲರಿಗೂ ತಲುಪಿಸುವಂತಾಗಲು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಗೆ ಮುಂಗಾರು ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಹಿಂಗಾರು ಸಂದರ್ಭದಲ್ಲಿಯೂ ಸಹ ಅಗತ್ಯ ಮುನ್ನೆಚ್ಚರ ವಹಿಸಬೇಕಿದೆ. ಹವಾಮಾನ ವೈಪರೀತ್ಯಗಳು ಯಾವಾಗ ಸಂಭವಿಸುತ್ತವೆ ಎಂಬುದು ತಿಳಿಯುವುದಿಲ್ಲ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲೆ, ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ವಾಟ್ಸಪ್ ಗುಂಪುಗಳ ಮೂಲಕ ನೆಟ್‌ವರ್ಕ್ ಬಲಪಡಿಸಬೇಕು. ಭೂಕುಸಿತ ಪ್ರದೇಶದಲ್ಲಿ ಮುನ್ನೆಚ್ಚರ ವಹಿಸಬೇಕು. ಅಂಗನವಾಡಿ, ಶಾಲಾ ಕಾಲೇಜುಗಳು, ಆಸ್ಪತ್ರೆ ಕಟ್ಟಡಗಳು ಸುಸ್ಥಿತಿಯಲ್ಲಿರಬೇಕು. ಕಟ್ಟಡಗಳು ಮಳೆ ನೀರು ಸೋರದಂತೆ ಗಮನಹರಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಲಸಿಗ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಕಲ್ಪಿಸಬೇಕು. ಅಧಿಕಾರಿಗಳು ಕೇಂದ್ರ ವ್ಯಾಪ್ತಿಯಲ್ಲಿದ್ದು ಕಾಲಕಾಲಕ್ಕೆ ಮಾಹಿತಿ ಒದಗಿಸುವಂತಾಗಬೇಕು. ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲೆಗೆ ಬೇಕಿರುವ ಅಗತ್ಯ ಉಪಕರಣ ಸೇರಿದಂತೆ ಅಗತ್ಯ ಮಾಹಿತಿಯ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ಮಾಡಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಮಾತನಾಡಿ, ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಮುಂಗಾರು ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರೇ ಈ ಸಂದರ್ಭದಲ್ಲಿಯೂ ತಮ್ಮ ತಮ್ಮ ಹಂತದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಲ ಕಾಲಕ್ಕೆ ಹವಾಮಾನ ವೈಪರೀತ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅಲ್ಲಿನ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದರು.

ವಿಪತ್ತು ನಿರ್ವಹಣಾ ಪರಿಣತ ಅನನ್ಯ ವಾಸುದೇವ್ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಕಂಟ್ರೋಲ್ ರೂಮ್ ಸಹಾಯವಾಣಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ತಹಸೀಲ್ದಾರ್‌ರಾದ ಪ್ರವೀಣ್ ಕುಮಾರ್ (ಮಡಿಕೇರಿ), ರಾಮಚಂದ್ರ (ವಿರಾಜಪೇಟೆ), ಕೆ.ಶ್ರೀಧರ್ (ಸೋಮವಾರಪೇಟೆ), ಕಿರಣ್ ಗೌರಯ್ಯ (ಕುಶಾಲನಗರ), ಡಿವೈಎಸ್‌ಪಿ ರವಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಲೋಯಲ್ ಮಿರಂಡಾ, ತಾ.ಪಂ.ಇಒಗಳಾದ ಅಪ್ಪಣ್ಣ (ವಿರಾಜಪೇಟೆ), ಪರಮೇಶ ಕುಮಾರ್ (ಸೋಮವಾರಪೇಟೆ), ಅಗ್ನಿಶಾಮಕ ಇಲಾಖೆ ಅಧಿಕಾರಿ ರಾಜೇಶ್ ಹಲವು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ