ಹೋಳಿ ಹಬ್ಬದಲ್ಲಿ ಅಹಿತಕರ ಘಟನೆ ಜರುಗದಂತೆ ಕ್ರಮ ವಹಿಸಿ

KannadaprabhaNewsNetwork | Published : Feb 26, 2025 1:05 AM

ಸಾರಾಂಶ

೬೦ ಬೇಡರ ವೇಷ ಸಂಘಟನೆಗಳು ನಗರದಲ್ಲಿದೆ. ಬೇಡರ ವೇಷದ ಸಂಪ್ರದಾಯ ಮೀರಿ ವರ್ತಿಸಬಾರದು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಶಿರಸಿ: ಹೋಳಿ ಹಬ್ಬ ಆಚರಿಸುವ ವೇಳೆ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಮಂಗಳವಾರ ನಗರದ ತಾಲೂಕಾಡಳಿತ ಸೌಧದಲ್ಲಿ ಹೋಳಿ ಹಬ್ಬದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಶಿರಸಿಯಲ್ಲಿ ಎರಡು ವರ್ಷಕ್ಕೊಮ್ಮೆ ಹೋಳಿ ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತದೆ.ಶಿರಸಿ ಹೋಳಿ ಹಬ್ಬ ಇಡೀ ರಾಜ್ಯದ ಗಮನ ಸೆಳೆದಿದೆ. ಎಲ್ಲ ಧರ್ಮದವರೂ ಸೇರಿ ವಿಜೃಂಭಣೆಯಿಂದ ಶಿರಸಿಯಲ್ಲಿ ಉತ್ಸವ ನಡೆಸಲಾಗುತ್ತದೆ ಎಂದ ಅವರು, ಬೇಡರವೇಷ ಸಂಚಾರ ನಡೆಸುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ಹೊಂಡ ಮುಚ್ಚುವಂತೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

೬೦ ಬೇಡರ ವೇಷ ಸಂಘಟನೆಗಳು ನಗರದಲ್ಲಿದೆ. ಬೇಡರ ವೇಷದ ಸಂಪ್ರದಾಯ ಮೀರಿ ವರ್ತಿಸಬಾರದು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈಗ ನಗರದಲ್ಲಿ ಬೇಡರವೇಷದ ಪೂರ್ವ ಸಿದ್ಧತೆ ನಡೆಯುತ್ತಿದೆ.ಆದರೆ ಮಧ್ಯರಾತ್ರಿವರೆಗೂ ಹಲಗೆ ಹೊಡೆಯುವ ಶಬ್ದ ಬರುತ್ತಿದೆ ಎಂದು ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿದೆ. ಹಾಗಾಗಿ ಸಮಯದ ಮಿತಿಯಲ್ಲಿ ಸಿದ್ಧತೆ ನಡೆಸಬೇಕು ಎಂದರು.

ಸುಭಾಷ್ ಕಾನಡೆ ಮಾತನಾಡಿ, ಸುಮಾರು ೧೦೦ ವರ್ಷಗಳಿಂದ ಶಿರಸಿಯಲ್ಲಿ ಹೋಳಿ ಹಬ್ಬ ಆಚರಿಸುತ್ತಿದ್ದೇವೆ. ಹೋಳಿ ಹಬ್ಬದ ಸಮಯದಲ್ಲಿ ಬೇಡರ ವೇಷ ಎಂಬ ಅತೀ ಅಪರೂಪದ ವಿಶೇಷ ಉತ್ಸವ ನಡೆಸಲಾಗುತ್ತದೆ. ಬೇಡರವೇಷ ಸ್ವಯಂ ಸಂಘಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರದಿಂದ ಆಗಬೇಕು. ಬೇಡರವೇಷಕ್ಕೆ ಸರಿಯಾದ ವೇದಿಕೆಯಿಲ್ಲ. ಇದರಿಂದ ಬೇಡರ ವೇಷ ಕಣ್ತುಂಬಿಕೊಳ್ಳಲು ಬಂದ ಜನರಿಗೆ ಸರಿಯಾಗಿ ಕಾಣುವುದಿಲ್ಲ. ಹಲಗೆ ಸದ್ದಿನಲ್ಲೇ ಬೇಡರ ವೇಷ ಪಾತ್ರದಾರಿ ಕುಣಿಯಬೇಕು ಆಗ ಈ ಕಲೆಗೆ ಒಂದು ವೈಶಿಷ್ಟ್ಯ ಬರುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಬೇಡರವೇಷ ಸಾಗುವಾಗ ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ಬೇಡರವೇಷ ಹಾಗೂ ಹೋಳಿ ಹಬ್ಬದ ದಿನ ಸಾರ್ವಜನಿಕರು ಸಹಕಾರ ನೀಡಬೇಕು.ಆಯುಧಗಳು ಸಾಂಕೇತಿಕ ರೂಪದಲ್ಲಿ ಇರಬೇಕು. ಹಬ್ಬಗಳಿಗೆ ಆಚರಣೆಗಳಿಗೆ ಇಲಾಖೆಗಳ ಸಹಕಾರ ಸದಾ ಇರಲಿದೆ. ಮಾ. ೧೦ ರಿಂದ ೧೪ ರವರೆಗೆ ನಡೆಯುವ ಹಬ್ಬವನ್ನು ನಾವೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸೋಣ ಎಂದರು.

ನಗರ ಠಾಣೆ ಪಿಎಸ್‌ಐ ನಾಗಪ್ಪ ಮಾಹಿತಿ ನೀಡಿ, ಬೇಡರವೇಷ ಹಬ್ಬಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಬಂದೋಬಸ್ತ್ ನೀಡಲಿದೆ. ಬೇಡರ ವೇಷಧಾರಿಗಳ ಮಾಹಿತಿ ಪಡೆದುಕೊಂಡಿದ್ದೇವೆ.ಲೋಹದ ಕತ್ತಿ ಬಳಸಬಾರದು. ಬೇಡರ ವೇಷಧಾರಿಯ ದೈಹಿಕ ಸದೃಢತೆ ಕಮೀಟಿ ಗಮನಿಸಬೇಕು. ಸಾರಾಯಿ ಸೇವಿಸಿ ಬೇಡರ ವೇಷದಲ್ಲಿ ಭಾಗಿಯಾಗಬಾರದು. ಹೋಳಿ ಹಬ್ಬದ ದಿನದಂದು ಅನುಚಿತವಾಗಿ ವರ್ತಿಸಬಾರದು ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ರಮಾಕಾಂತ್ ಭಟ್,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಪೌರಾಯುಕ್ತ ಕಾಂತರಾಜ್ ಮತ್ತಿತರರು ಇದ್ದರು.

ಶಿರಸಿ ನಗರಕ್ಕೆ ಗಾಂಜಾ ಬರುತ್ತಿವೆ. ಮಕ್ಕಳು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದೆ. ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುವವರು ಕಂಡು ಬಂದಲ್ಲಿ ಅಥವಾ ಮಾಹಿತಿ ಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

Share this article