ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಲು ಕ್ರಮವಹಿಸಿ

KannadaprabhaNewsNetwork | Published : May 6, 2025 12:18 AM

ಸಾರಾಂಶ

ಯಳಂದೂರು ಭಗೀರಥ ಜಯಂತಿ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನಸ್ತೋಮ.

ಕನ್ನಡಪ್ರಭ ವಾರ್ತೆ ಯಳಂದೂರು

ಉಪ್ಪಾರ ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಯತ್ನಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗ ಪೈಪೋಟಿಯುಕ್ತ ಜೀವನವಾಗಿದೆ. ನಾವು ಎಲ್ಲಿ ಹೋದರೂ ಸವಾಲಗಳನ್ನು ಸ್ವೀಕರಿಸಲು ಸಿದ್ಧರಾಗಬೇಕಿದೆ. ಶಿಕ್ಷಣದಿಂದ ಎಲ್ಲವನ್ನೂ ಗೆಲ್ಲುವ ಛಲ ನಮಗೆ ಬರುತ್ತದೆ. ಉಪ್ಪಾರ ಸಮುದಾಯ ಶ್ರಮದಾಯಕ ಸಮುದಾಯವಾಗಿದೆ. ಇವರು ಪ್ರಯತ್ನಪಟ್ಟರೆ ಏನು ಬೇಕಾದರೂ ಸಾಧಿಸುತ್ತಾರೆ. ಇದಕ್ಕೆ ದೊಡ್ಡ ನಿದರ್ಶನ ಭಗೀರಥ ಮಹರ್ಷಿಯಾಗಿದ್ದಾರೆ. ಹಾಗಾಗಿ ಈ ಸಮುದಾಯದ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ರಾಜಕೀಯವಾಗಿ ನಮ್ಮ ಜಿಲ್ಲೆಯಲ್ಲಿ ಈ ಸಮುದಾಯ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಆರ್ಥಿಕವಾಗಿ ಇವರು ಸಬಲರಾಗಬೇಕು. ಮೌಢ್ಯಗಳಿಂದ ದೂರವಿರಬೇಕು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ೩೩ ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ನನ್ನ ಗೆಲುವಿನಲ್ಲಿ ಈ ಸಮುದಾಯದ ಪಾತ್ರ ಹೆಚ್ಚಾಗಿದೆ. ನಾನು ಇದಕ್ಕೆ ಚಿರಋಣಿಯಾಗಿದ್ದೇನೆ. ಯಳಂದೂರಲ್ಲಿ ಭಗೀರಥ ಭವನ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿತ್ತು. ಈಗ ಇದು ಬಗೆಹರಿದಿದೆ. ಇಲ್ಲಿಗೆ ನನ್ನ ವಿಶೇಷ ಅನುದಾನದಡಿಯಲ್ಲಿ ೫೦ ಲಕ್ಷ ರು.ಗಳ ಹಣವನ್ನು ಮಂಜೂರು ಮಾಡಿದ್ದೇನೆ. ಅಲ್ಲದೆ ಕೊಳ್ಳೇಗಾಲದಲ್ಲೂ ಈ ಸಮುದಾಯವರು ೩೦ ಸೆಂಟ್ ಜಾಗವನ್ನು ಖರೀದಿ ಮಾಡಿದ್ದಾರೆ. ಅವರೂ ಕೂಡ ಸಮುದಾಯ ಭವನದ ನಿರ್ಮಾಣಕ್ಕೆ ಹಣವನ್ನು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೂ ಕೂಡ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದೇನೆ ಎಂದರು. ಅಲ್ಲದೆ ನನ್ನ ಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಮಗಳ ಸಮುದಾಯ ಭವನಗಳಿಗೆ ಹಣವನ್ನು ನೀಡಲಾಗುವುದು ಎಂದರು. ಇದಕ್ಕೂ ಮುಂಚೆ ಪಟ್ಟಣದ ಷಡಕ್ಷರ ದೇವರ ಗದ್ದುಗೆಯ ಮುಂಭಾಗದಿಂದ ಸತ್ತಿಗೆ ಸೂರಿಪಾನಿ, ವಿವಿಧ ಕಲಾತಂಡಗಳು ಸೇರಿದಂತೆ ಬೆಳ್ಳಿರಥದಲ್ಲಿ ಮಹರ್ಷಿ ಭಗೀರಥರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯನ್ನು ಮಾಡಲಾಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಹೆಚ್ಚು ಕಳೆಕಟ್ಟಿತು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಉಪ್ಪಾರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಪ್ರಿಯಾಶಂಕರ್ ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಸುಶೀಲಾಪ್ರಕಾಶ್, ಮಹೇಶ್, ವೈ.ಜಿ.ರಂಗನಾಥ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಸಿದ್ದರಾಜು, ವೈ.ಎಸ್. ನಂಜಶೆಟ್ಟಿ, ಕಂದಹಳ್ಳಿ ನಂಜುಂಡಸ್ವಾಮಿ, ವೈ.ಕೆ.ಮೋಳೆನಾಗರಾಜು, ಕೆಸ್ತೂರು ನಾಗರಾಜು, ಸುರೇಶ್, ತಹಶೀಲ್ದಾರ್ ಬಸವರಾಜು, ಸಿಪಿಐ ಕೆ. ಶ್ರೀಕಾಂತ್ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಸಿದ್ದಪ್ಪಸ್ವಾಮಿ, ರೇಚಣ್ಣ ಹಾಜರಿದ್ದರು.

Share this article