ಮಾನಸಿಕ, ದೈಹಿಕ ನೋವಿನ ನಡುವೆಯೂ ಮಿತ್ತೂರಿನ ಅನನ್ಯ ಎಸ್ಸೆಸ್ಸೆಲ್ಸಿ 8ನೇ ಟಾಪರ್‌!

KannadaprabhaNewsNetwork |  
Published : May 06, 2025, 12:18 AM IST
ಅನನ್ಯ | Kannada Prabha

ಸಾರಾಂಶ

ಈಕೆ ಅನನ್ಯ ಕಾಡುತೋಟ. ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ನಾರಾಯಣ ಕಾಡುತೋಟ ಮತ್ತು ರಾಜೇಶ್ವರಿ ಕಾಡುತೋಟ ದಂಪತಿಯ ಕಿರಿಯ ಪುತ್ರಿ. ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿ. ಸಾವು, ನೋವಿನ ದುಃಖ ಜೀರ್ಣಿಸಿದ ಈಕೆ ತನ್ನ ಮನೋಧೈರ್ಯದಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ರಾಜ್ಯಮಟ್ಟದಲ್ಲಿ ೮ನೇ ರ‍್ಯಾಂಕ್ (618 ಅಂಕ) ಪಡೆಯುವ ಮೂಲಕ ಸಾಧನೆ ತೋರಿದ್ದಾಳೆ.

ದುರ್ಗಾಕುಮಾರ್ ನಾಯರ್ ಕೆರೆ

ಕನ್ನಡಪ್ರಭ ವಾರ್ತೆ ಸುಳ್ಯ

ಕಣ್ಣೆದುರೇ ಅಪಘಾತದಲ್ಲಿ ಅಗಲಿ ಹೋದ ಪ್ರೀತಿಯ ಅಕ್ಕ, ಅದೇ ಅಪಘಾತದಲ್ಲಿ ಕಾಲಿಗೆ ಗಂಭೀರ ಗಾಯಗಳಾಗಿ ದಿನಗಟ್ಟಲೆ ನಿಶ್ಚಲವಾಗಿ ಮಲಗಿರಬೇಕಾದ ಸ್ಥಿತಿ... ಹೀಗೆ ಮನಸ್ಸು ಮತ್ತು ದೇಹ ನೋವಿನ ಸ್ಥಿತಿಯಲ್ಲಿದ್ದರೂ ಇಲ್ಲೊಬ್ಬಳು ವಿದ್ಯಾರ್ಥಿನಿ ತನ್ನ ಮನೋಧೈರ್ಯದಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ರಾಜ್ಯಮಟ್ಟದಲ್ಲಿ ೮ನೇ ರ‍್ಯಾಂಕ್ (618 ಅಂಕ) ಪಡೆಯುವ ಮೂಲಕ ಸಾಧನೆ ತೋರಿದ್ದಾಳೆ.

ಈಕೆ ಅನನ್ಯ ಕಾಡುತೋಟ. ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ನಾರಾಯಣ ಕಾಡುತೋಟ ಮತ್ತು ರಾಜೇಶ್ವರಿ ಕಾಡುತೋಟ ದಂಪತಿಯ ಕಿರಿಯ ಪುತ್ರಿ. ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿ.

ಸಹೋದರಿಯ ಕಸಿದ ಅಪಘಾತ:

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿನಿಯಾಗಿರುವ ಅಕ್ಕ ರಚನಾ ಹಾಗೂ ಅನನ್ಯಾ ಪ್ರತಿಭೆ, ಛಲ ಮತ್ತು ಕ್ರಿಯಾಶೀಲತೆ ಸಂಗಮಿಸಿದ ಆ ಸಹೋದರಿಯರು. ಇವರ ಬಾಳಿನಲ್ಲಿ ವಿಧಿ ಬರ ಸಿಡಿಲಾಗಿ ಬಂದೆರಗಿದ್ದು, ಕಳೆದ ನ.8ರಂದು.

ಅಕ್ಕನೊಂದಿಗೆ ಅನನ್ಯಾ ಸಂಜೆಯ ವೇಳೆಗೆ ಸ್ಕೂಟಿಯಲ್ಲಿ ಸುಳ್ಯದಿಂದ ಮನೆಗೆ ಹೋಗುತ್ತಿದ್ದಾಗ ಅಮೈ ಮಡಿಯಾರು ಬಳಿ ಸ್ಕೂಟಿ ಹಾಗೂ ಸರ್ಕಾರಿ ಬಸ್ ಪರಸ್ಪರ ಡಿಕ್ಕಿ ಹೊಡೆದಿತ್ತು. ಸ್ಕೂಟಿ ಚಲಾಯಿಸುತ್ತಿದ್ದ ರಚನಾ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಇಹಲೋಕ ತ್ಯಜಿಸಿದ್ದರು. ಅನನ್ಯಾ ಅವರ ಬಲ ಕಾಲಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರಿದ್ದರು.

ಘಟನೆಯ ಮರುದಿನ ರಚನಾ ಮೃತದೇಹವನ್ನು ಮನೆಗೆ ತಂದಾಗ ಅನನ್ಯಾರನ್ನು ಆಂಬುಲೆನ್ಸ್‌ನಲ್ಲಿಯೇ ಕರೆ ತಂದು ಅಕ್ಕನ ಅಂತಿಮ ದರ್ಶನ ಮಾಡಿಸಿ ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ವಾಕರ್‌ ಮೂಲಕವೇ ಪರೀಕ್ಷೆ:

ಬಳಿಕ ಒಂದಷ್ಟು ದಿನ ಆಸ್ಪತ್ರೆಯಲ್ಲಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಕರೆದೊಯ್ಯಲಾಗಿತ್ತು. ಅಕ್ಕನ ಅಗಲಿಕೆಯಿಂದ ಆಘಾತ ಒಂದೆಡೆ, ಅಪಘಾತದಿಂದ ದೈಹಿಕವಾಗಿಯೂ ನೋವು. ಶೈಕ್ಷಣಿಕ ಬದುಕಿನ ನಿರ್ಣಾಯಕ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ. ಇಂತಹದ್ದೊಂದು ವಿಷಮ ಸ್ಥಿತಿಯನ್ನು ತನ್ನ ಮನೋಶಕ್ತಿಯೊಂದರಿಂದಲೇ ಎದುರಿಸಿದ್ದು ಅನನ್ಯಾ.

ಘಟನೆ ನಡೆದ ಬಳಿಕ ನಾಲ್ಕು ತಿಂಗಳು ವಾಕರ್ ಸಹಾಯದಿಂದಲೇ ಅಪ್ಪನೊಂದಿಗೆ ಶಾಲೆಗೆ ಹೋದರು. ಸಹಪಾಠಿಗಳ ಮತ್ತು ಶಿಕ್ಷಕರ ಸಹಕಾರದಿಂದ ಅಧ್ಯಯನ ನಡೆಸಿದರು. ವಾಕರ್ ಸಹಾಯದಿಂದಲೇ ಹೋಗಿ ಪರೀಕ್ಷೆಯನ್ನೂ ಎದುರಿಸಿದರು. ಇದೀಗ ಫಲಿತಾಂಶ ಬಂದಿದ್ದು, ೬೧೮ ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ಎಂಟನೇ ಟಾಪರ್ ಆಗಿದ್ದಾರೆ.

ಈ ಘಟನೆಯ ಬಳಿಕ ಅನನ್ಯಾ ನೊಂದಿದ್ದಳು. ಇಷ್ಟೇ ಮಾರ್ಕ್ಸ್‌ ಪಡೆಯಬೇಕೆಂದು ನಾವು ಯಾವತ್ತೂ ಒತ್ತಾಯಿಸಿರಲಿಲ್ಲ. ತುಂಬಾ ಕಷ್ಟಪಟ್ಟು ಓದಿದ್ದಾಳೆ. ಅವಳ ಕಲಿಕೆಗಾಗಿ ಫ್ಯಾಮಿಲಿಯವರು, ಫ್ರೆಂಡ್ಸ್, ಶಾಲೆಯವರು ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಅನನ್ಯಾ ಹೆತ್ತವರು ಹೇಳಿದರು.

ಅನನ್ಯ ಬಹುಮುಖ ಪ್ರತಿಭೆಯ ಹುಡುಗಿ. ಯಕ್ಷಗಾನ, ನಾಟಕ, ಭಾಷಣ, ರಸ ಪ್ರಶ್ನೆ, ನಿರೂಪಣೆ, ಚರ್ಚೆ ಹೀಗೇ ಬಹುಶ್ರುತ ಸಾಧನೆ. ಬದುಕು ಕೊಟ್ಟ ನೋವನ್ನು ಮನೋಶಕ್ತಿಯಿಂದಲೇ ಎದುರಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ.

ಪಶು ವೈದ್ಯಳಾಗುವ ಆಸೆ

ಪರೀಕ್ಷೆ ಕಳೆದಾಗ ೬೨೦ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆ. ಪಶು ವೈದ್ಯಕೀಯ ಶಿಕ್ಷಣ ಪಡೆದು ಪಶು ವೈದ್ಯಳಾಗಬೇಕೆಂದು ನನ್ನಾಸೆ. ಯಾಕೆಂದರೆ ಪ್ರಾಣಿಗಳ ಆರೈಕೆ ಮಾಡುವುದೆಂದರೆ ನನಗೆ ವಿಪರೀತ ಪ್ರೀತಿ. ಅಕ್ಕನಿಗೆ ಐಎಎಸ್ ಮಾಡಬೇಕೆಂಬ ಹಂಬಲ ಇತ್ತು. ಅಕ್ಕನ ಆಸೆ ಈಡೇರಿಸಲೂ ಪ್ರಯತ್ನ ನಡೆಸುತ್ತೇನೆ. ಅಕ್ಕ ಯಾವತ್ತೂ ನನ್ನ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುತ್ತಿದ್ದಳು.ಶಾಲೆಗೆ ಹೋಗಲು ಸಾಧ್ಯವಿಲ್ಲದಿದ್ದಾಗ ಫ್ರೆಂಡ್ಸ್ ಜತೆ ಕೇಳ್ತಾ ಇದ್ದೆ. ಟೀಚರ್ಸ್ ಅಂತೂ ತುಂಬಾ ಬೆಂಬಲ ನೀಿದರು. ಆಸ್ಪತ್ರೆಗೂ ಬಂದು ಮಾರ್ಗದರ್ಶನ ಮಾಡ್ತಾ ಇದ್ರು. ಆತ್ಮವಿಶ್ವಾಸ ತುಂಬುತ್ತಿದ್ದರು ಎಂದು ಅನನ್ಯಾ ಹೇಳಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ