ಶಿಡ್ಲಘಟ್ಟ ನಗರಸಭೆ ಆಯುಕ್ತರಿಗೆ ನಿಂದಿಸಿದ ಆರೋಪದ ಮೇಲೆ, 2023ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಾಜೀವ್‌ಗೌಡ ಅವರಿಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು : ಶಿಡ್ಲಘಟ್ಟ ನಗರಸಭೆ ಆಯುಕ್ತರಿಗೆ ನಿಂದಿಸಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ಗೌಡ ಅವರಿಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.

ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ಸಮಜಾಯಿಷಿ ನೀಡಬೇಕು

‘ನಿಮಗೆ ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಕೆಪಿಸಿಸಿ ಶಿಸ್ತು ಸಮಿತಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ’ ಎಂದು ರಾಜೀವ್‌ಗೌಡ ಅವರಿಗೆ ನೀಡಲಾಗಿರುವ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರು ಗುರವಾರ ನೋಟಿಸ್ ನೀಡಿದ್ದು, ನೀವು ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಸಭೆಯೊಂದಕ್ಕೆ ಸಂಬಂಧಪಟ್ಟಂತೆ ನಗರಸಭೆ ವ್ಯಾಪ್ತಿಯಲ್ಲಿ ಹಾಕಿರುವ ಬ್ಯಾನರ್‌ ಬಗ್ಗೆ ನಗರಸಭೆ ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೀರಿ. ಈ ವೇಳೆ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.

ಪಕ್ಷಕ್ಕೆ ಮುಜುಗರ

ನಿಮ್ಮ ಈ ವರ್ತನೆ ಹಾಗೂ ನಗರಸಭೆ ಆಯುಕ್ತರೊಂದಿಗೆ ಆಡಿರುವ ಮಾತುಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿವೆ. ಜತೆಗೆ ತಾವು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುತ್ತೀರಿ ಎಂದು ತಿಳಿದು ಈ ಕಾರಣ ಕೇಳಿ ನೋಟಿಸ್ ನೀಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಹೀಗಾಗಿ ಈ ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ಈ ಬಗ್ಗೆ ಸೂಕ್ತ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಈ ಬಗ್ಗೆ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.