ಪಾರಂಪರಿಕ ಪ್ರದೇಶ ಅಭಿವೃದ್ದಿಗೆ ಮುಂದಾಗಿ: ಡಾ. ಸುರೇಶ್ ಬಿ. ಇಟ್ನಾಳ್

KannadaprabhaNewsNetwork |  
Published : Sep 30, 2026, 02:30 AM IST
ಗಂಗಾವತಿ ತಾಲೂಕಿನ ಆನೆಗೊಂದಿಯ ಗಗನ್ ಮಹಲ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್  ಉದ್ಘಾಟಿಸಿದರು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳಿದ್ದು, ಪಾರಂಪರಿಕ ನಿಯಮಗಳು ಹಾಗೂ ಯುನೆಸ್ಕೋ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸುಸ್ಥಿರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಾಗಿದೆ

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳಿದ್ದು, ಪಾರಂಪರಿಕ ನಿಯಮಗಳು ಹಾಗೂ ಯುನೆಸ್ಕೋ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸುಸ್ಥಿರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಅಭಿಪ್ರಾಯಪಟ್ಟರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗಂಗಾವತಿ ತಾಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಆನೆಗೊಂದಿ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಆನೆಗೊಂದಿಯ ಗಗನ್ ಮಹಲ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆನೆಗೊಂದಿ ಪಕ್ಕದಲ್ಲಿರುವ ಹಂಪಿ ವಿಶ್ವ ಪಾರಂಪರಿಕ ತಾಣವಾಗಿರುವುದರಿಂದ, ನಿಯಮಾನುಸಾರ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ ನಡೆಸಿ ಪರಿಸರ ಹಾಗೂ ಇತಿಹಾಸಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಅತ್ಯಗತ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಹೋಮ್‌ಸ್ಟೇ ನೀತಿಯಡಿ ಅನುಮೋದನೆ ಪ್ರಕ್ರಿಯೆ, ಪ್ರವಾಸಿ ಸರ್ಕಿಟ್ ರಚನೆ, ಸೈಕ್ಲಿಂಗ್ ಪ್ರೋತ್ಸಾಹ, ರೆಂಟ್ ಎ ಬೈಕ್ ಸೇವೆ, ಶೌಚಾಲಯ ಸಂಕೀರ್ಣಗಳು ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಭಿನ್ನವಾಗಿ ಅಂಜನಾದ್ರಿ ಸುತ್ತಮುತ್ತ ಸೈಕ್ಲಿಂಗ್ ಜಾಥಾ ಹಮ್ಮಿಕೊಳ್ಳುವ ಮೂಲಕ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಲಾಯಿತು. ಈ ಬಾರಿಯ ಪರಿಕಲ್ಪನೆಯಂತೆ ಪ್ರವಾಸೋದ್ಯಮದಲ್ಲಿ ಡಿಜಿಟಲ್ ಮಾಧ್ಯಮ ಹಾಗೂ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಹೆಚ್ಚಾಗಬೇಕಿದೆ. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪರಿಕರಗಳ ಮೂಲಕ ಪ್ರವಾಸಿ ತಾಣಗಳನ್ನು ಪ್ರಚಾರ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ, ಕೊಪ್ಪಳ ಪ್ರವಾಸೋದ್ಯಮದ ಕುರಿತು ಉತ್ತಮ ಡಿಜಿಟಲ್ ಕಂಟೆಂಟ್ ರಚಿಸಿದ ಮೂವರು ಕಂಟೆಂಟ್ ಕ್ರಿಯೇಟರ್ಸ್ಗೆ ಪ್ರೋತ್ಸಾಹ ನೀಡುವ ಮೂಲಕ ಇತರರಿಗೂ ಪ್ರೇರಣೆ ನೀಡುವ ಹೊಸ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ. ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಸಾಧನಗಳ ಮೂಲಕ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಎನ್‌ಸಿಸಿ, ಕೆವೈಟಿಸಿ ತಂಡ, ಗೋ ಗ್ರೀನ್, ಚರಣ ಬಳಗ, ಪರಿಸರ ಸೇವಾ ಟ್ರಸ್ಟ್ ಗಂಗಾವತಿ, ಎಕ್ಸ್ಪ್ಲೋರ್ ಕಿಷ್ಕಿಂದಾ, ಲೀವ್ ವಿತ್ ಹ್ಯುಮ್ಯಾನಿಟಿ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರಿಗೆ ಜಿಲ್ಲಾಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ರತ್ನಶ್ರೀ, ಡಾ. ಶಿವಕುಮಾರ ಹಾಗೂ ಮಂಜುನಾಥ ಗುಡ್ಲಾನೂರು ಅವರು ಮಾತನಾಡಿದರು. ಅಭಿನಂದನಾ ಪ್ರಮಾಣ ಪತ್ರ ವಿತರಣೆ: ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ನಾವೀನ್ಯತೆ, ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆ ಹಾಗೂ ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಕಂಟೆಂಟ್ ಕ್ರಿಯೇಷನ್ ವಿಶೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿವಿಧ ಸಂಘ ಸಂಸ್ಥೆಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೊಪ್ಪಳ ಸಹಾಯಕ ಆಯುಕ್ತ ಮಹೇಬೂಬ್ ಜೀಲಾನ್ ಖುರೇಶಿ, ಆನೆಗೊಂದಿ ರಾಜವಂಶಸ್ಥರಾದ ಶ್ರೀಕೃಷ್ಣ ದೇವರಾಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ಗಂಗಾವತಿ ತಹಶಿಲ್ದಾರ ವಸಂತ ಕುಮಾರಿ, ತಾ.ಪಂ ಇಓ ರಾಮರೆಡ್ಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ವಿವಿದ ಸಂಘ ಸಂಸ್ಥೆಯವರು ಭಾಗವಹಿಸಿದ್ದರು.

ಜಾಗೃತಿಗೆ ಸೈಕ್ಲಿಂಗ್ ಜಾಥಾ: ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಐತಿಹಾಸಿಕ ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿಯ ಗಗನ್ ಮಹಲ್‌ವರೆಗೆ ಆಯೋಜಿಸಲಾಗಿದ್ದ ವಿಶೇಷ ಸೈಕ್ಲಿಂಗ್ ಜಾಥಾ ಜನರ ಗಮನ ಸೆಳೆಯಿತು. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಸೈಕ್ಲಿಂಗ್ ಪ್ರಿಯರು ಬೆಟ್ಟದ ತಪ್ಪಲಿನಿಂದ ಗಗನ್ ಮಹಲ್‌ವರೆಗೆ ಸೈಕಲ್ ತುಳಿಯುವ ಮೂಲಕ ಐತಿಹಾಸಿಕ ತಾಣಗಳ ಮಹತ್ವ ಮತ್ತು ಪರಿಸರಸ್ನೇಹಿ ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರಿಗೆ ಅಭಾವ ಆಗದಿರಲಿ: ಜಿಲ್ಲಾಧಿಕಾರಿ ಸೂಚನೆ
ಪರೀಕ್ಷಾ ಪ್ರಾಧಿಕಾರ ನಿಯಮದಂತೆ ಪರೀಕ್ಷೆ ನಡೆಸಿ: ಡಿಸಿ