ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.ನಗರದ ಬಿಎಸ್‌ಪಿ ಕಚೇರಿಯಲ್ಲಿ ನಡೆದ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸೀರಾಮ್ ಆಶಯ, ಕನಸು ನನಸಾಗಿಸುವ ನಿಟ್ಟಿನಲ್ಲಿ ಕಂಕಣಬದ್ಧರಾಗಬೇಕು. ಕಾನ್ಸೀರಾಮ್ ಮಾತಿನಂತೆ ಈ ಚುನಾವಣೆಯನ್ನು ಯುದ್ಧದಂತೆ ಪರಿಗಣಿಸಿ ಎದುರಿಸಬೇಕು ಎಂದು ಕಿವಿಮಾತು ಹೇಳಿದರು.
ದೇಶದಲ್ಲಿ ಪಕ್ಷ ನಡೆಸುತ್ತಿರುವ ಸಾಮಾಜಿಕ ಪರಿವರ್ತನೆ ಮತ್ತು ಸ್ವಾಭಿಮಾನದ ಚಳುವಳಿ ಉಳಿದು ಮುಂದುವರೆಯ ಬೇಕಾದರೆ ಕಾರ್ಯಕರ್ತರು ಬಿಎಸ್‌ಪಿ ಗೆಲ್ಲಿಸಬೇಕು. ಕಾರ್ಯಕರ್ತರು ತಮ್ಮ ಎಲ್ಲಾ ಕೆಲಸ ಬದಿಗೊತ್ತಿ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಸದಾ ಶೋಷಿತರು, ಬಡವರು, ಹಿಂದುಳಿದವರು ಅಲ್ಪಸಂಖ್ಯಾತರು ದೀನದಲಿತರ ಪರವಾಗಿ ದುಡಿಯುತ್ತಿರುವ ಪಕ್ಷದ ಅಭ್ಯರ್ಥಿ ಕೆಟಿ ರಾಧಾಕೃಷ್ಣ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆಬಿ ಸುಧಾ ಮಾತನಾಡಿ, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಕಳೆದ ನಾಲ್ಕು ದಶಕಗಳಿಂದ ಸಲ್ಲಿಸಿರುವ ಸೇವೆ ಹೋರಾಟಗಳನ್ನು ಶೋಷಿತ ವರ್ಗದವರು ಗುರುತಿಸಿ, ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಅಲೀಖಾನ್ ಮಾತನಾಡಿ, ಈ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಬೇಕಾದರೆ ದಲಿತ ಪರ ಸಂಘಟನೆಗಳೆಲ್ಲವೂ ಒಗ್ಗೂಡಬೇಕು, ಶೋಷಿತರು ಸಂಘಟಿತರಾಗಿ ಅಭ್ಯರ್ಥಿ ಪರ ದುಡಿಯಬೇಕು ಎಂದು ಮನವಿ ಮಾಡಿದರು.ಪಕ್ಷದ ಅಭ್ಯರ್ಥಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮಾತನಾಡಿ, ತಾವು ಕೈಗೊಂಡಿರುವ ಸ್ವಾಭಿಮಾನದ ಚಳುವಳಿಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ತಮಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಲೋಕಸಭಾ ಕ್ಷೇತ್ರ ಸಮಿತಿ ಸಂಯೋಜಕ ಪಿ.ಪರಮೇಶ್ವರ್, ಕೆಆರ್ ಗಂಗಾಧರ್, ಜಿಲ್ಲಾ ಸಂಯೋಜಕ ಕೆಎಂ ಗೋಪಾಲ್, ಯುಬಿ ಮಂಜಯ್ಯ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಸ್. ಮಂಜುಳಾ, ಬಿಎಂ ಶಂಕರ್, ಪಿ.ಕೆ. ಮಂಜುನಾಥ್ ಉಪಸ್ಥಿತರಿದ್ದರು.