ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : May 01, 2024, 01:22 AM IST
30ಕೆಎಂಎನ್‌ಡಿ-5ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲ ತಹಸೀಲ್ದಾರ್‌ಗಳು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು‌ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರತಿದಿನ ಸಭೆ ನಡೆಸಿ ತೀವ್ರತರ ಹಾಗೂ ಸಾಮಾನ್ಯ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಮಾಡಿಕೊಂಡು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಕಡೆ ತುರ್ತಾಗಿ ಕ್ರಮವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲ ತಹಸೀಲ್ದಾರ್‌ಗಳು, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು‌ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರತಿದಿನ ಸಭೆ ನಡೆಸಿ ತೀವ್ರತರ ಹಾಗೂ ಸಾಮಾನ್ಯ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಮಾಡಿಕೊಂಡು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಬೇಕು. ಆಗ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ. ಸಮರ್ಪಕ ಹಾಗೂ ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು. ಟ್ಯಾಂಕರ್ ಹಾಗೂ ಖಾಸಗಿ ಬೋರ್ ವೆಲ್‌ಗಳಲ್ಲಿ ನೀರು ವೆಚ್ಚದ ಬಿಲ್ಲುಗಳನ್ನು ವಿಪತ್ತು ನಿರ್ವಹಣೆಯಡಿ ಪಾವತಿಸಲಾಗುವುದು. ಇದಲ್ಲದೇ, ಪ್ರತಿ ತಾಲೂಕಿಗೆ ಆರ್.ಡಿ.ಪಿ.ಆರ್ ಇಲಾಖೆಯಿಂದ ಈ ಹಿಂದೆ 20 ಲಕ್ಷ ಹಾಗೂ 25 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಈ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ವರದಿ ಪಡೆದುಕೊಳ್ಳಿ. ಇದರೊಂದಿಗೆ 45 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.

ತಾಲೂಕು ಮಟ್ಟದಲ್ಲಿ ಎಲ್ಲೆಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಅವುಗಳನ್ನು ಟ್ಯಾಂಕರ್ ಮ್ಯಾನೇಜ್ಮೆಂಟ್ ಆ್ಯಪ್‌ನಲ್ಲಿ ದಾಖಲಿಸಬೇಕು. ಇಲ್ಲವಾದಲ್ಲಿ ಅವರಿಗೆ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಖಾಸಗಿ ಬೋರ್ ವೆಲ್ ಗಳಲ್ಲಿ ನೀರು ಪಡೆಯುತ್ತಿದ್ದರೆ ಅವರೊಂದಿಗರ ಒಪ್ಪಂದ ಮಾಡಿಕೊಂಡು ಕಾರ್ಯಾದೇಶ ನೀಡಿರುವ ಪ್ರತಿಯನ್ನು ಸಲ್ಲಿಸಬೇಕು ಎಂದರು.

ಪ್ರತಿವಾರಕ್ಕೊಮ್ಮೆ ತಹಸೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಪಿಡಿಒಗಳ ಸಭೆ ನಡೆಸಿ ಕುಡಿಯುವ ನೀರು ಮೇವಿನ ತೊಂದರೆ ಇರುವ ಗ್ರಾಮಗಳ ವಿವರ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು 120 ಖಾಸಗಿ ಬೋರ್ ವೆಲ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು, ಕೆ.ಆರ್.ಪೇಟೆ -29, ಮದ್ದೂರು-17, ಮಳವಳ್ಳಿ-7, ಮಂಡ್ಯ-37, ನಾಗಮಂಗಲ-17, ಪಾಂಡವಪುರ-8, ಶ್ರೀರಂಗಪಟ್ಟಣ-5 ಬೋರ್ ವೆಲ್ ಗಳಿಂದ ನೀರು ಪಡೆಯಲಾಗುತ್ತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಮಹೇಶ್, ನಗರಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಂ.ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್ ನಿರ್ಮಲ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ