ಹಗರಿಬೊಮ್ಮನಹಳ್ಳಿ: ಸರಿಯಾದ ಗುರಿ, ಆತ್ಮವಿಶ್ವಾಸದಿಂದ ಮಾತ್ರ ಸಾಧನೆ ಮಾಡಬಹುದು. ಪ್ರತಿಭೆ ಸೋಮಾರಿಗಳ ಸ್ವತ್ತಲ್ಲ, ಅದು ಸಾಧಕರ ಸ್ವತ್ತು. ವಿದ್ಯಾರ್ಥಿಗಳು ಪೋಷಕರ ಕಷ್ಟಗಳನ್ನು ಪರಿಗಣಿಸಿ ವಿದ್ಯಾವಂತರಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದರು.
ಗಾಣಿಗ ಸಮಾಜದ ತಾಲೂಕು ಅಧ್ಯಕ್ಷ ಸಂದೀಪ್ ಶಿವಮೊಗ್ಗ ಮಾತನಾಡಿ, ಸಮಾಜದ ಪ್ರತಿಭಾವಂತರನ್ನು ಗೌರವಿಸುವ ಸಮಾರಂಭ ಇತರರಿಗೂ ಪ್ರೇರಣೆಯಾಗುವ ಉದ್ದೇಶ ಹೊಂದಿದೆ. ರಾಜ್ಯಕ್ಕೆ ದೇಶಕ್ಕೆ ಉನ್ನತ ಕೊಡುಗೆ ನೀಡುವಲ್ಲಿ ಸಮಾಜದ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಆಶಿಸಿದರು.
ತಾಪಂ ಇಒ ವಿಶ್ವನಾಥ್ ಪಾಲಯ್ಯನಕೋಟೆ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆಯತ್ತ ಗುರಿ ಹೊಂದಬೇಕು. ಆಗ ಬದುಕು ಭವ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.ಸಮಾಜದ ಜಿಲ್ಲಾಧ್ಯಕ್ಷ ಜಿ.ಉಮೇಶ್ ಮಾತನಾಡಿದರು. ಹಾಲಶಿದ್ದೇಶ್ವರ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ೫೦ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದ ಭೂಮಿಕಾ ನಾಗರಾಜ ಅವರನ್ನು ಸನ್ಮಾನಿಸಲಾಯಿತು.
ಹಗರಿಬೊಮ್ಮನಹಳ್ಳಿಯ ಪಂಚಮಸಾಲಿ ಭವನದಲ್ಲಿ ತಾಲೂಕು ಗಾಣಿಗ ಸಮಾಜ ಇತ್ತೀಚೆಗೆ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.