ಬೀರೂರು ಶ್ರೀಮಾರ್ಗದ ಮಲ್ಲಪ್ಪ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುಪ್ರತಿಭೆಗೆ ತಕ್ಕ ಪ್ರೋತ್ಸಾಹವಿಲ್ಲದೆ ಅನೇಕ ಪ್ರತಿಭೆಗಳು ಕಮರಿ ಹೋಗುತ್ತಿದ್ದು ಜವಾಬ್ದಾರಿ ಸ್ಥಾನದಲ್ಲಿರುವವರು ಅವರನ್ನು ಬೆಳಕಿಗೆ ತರುವ ಕಾರ್ಯ ಮಾಡಬೇಕು ಎಂದು ಮೈಸೂರಿನ ನಿವೃತ್ತ ಸಹಾಯಕ ಆಯುಕ್ತ ಎಂ.ಆರ್.ಸೋಮಶೇಖರ್ ಹೇಳಿದರು. ತಾಲೂಕಿನ ಯಗಟೀಪುರದ ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಮತ್ತು ಬೀರೂರು ಶ್ರೀಮಾರ್ಗದ ಮಲ್ಲಪ್ಪ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರಲ್ಲೂ ಬುದ್ಧಿಶಕ್ತಿ ಸಮಾನವಾಗಿದ್ದರು ಅದೇ ರೀತಿ ಎಲ್ಲರಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಆದರೆ ಅವಕಾಶ ದೊರೆಯದೆ ಅನೇಕ ಪ್ರತಿಭೆಗಳು ಮರೆಯಾಗಿ ಹೋಗುತ್ತಿವೆ. ಇಂತಹ ಅವಕಾಶ ವಂಚಿತ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಹಕಾರಿ ಎಂದರು.
ಶಿಕ್ಷಣದ ಜೊತೆಗೆ ಶಿಕ್ಷೆಯೂ ಇರಬೇಕು. ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆಯುವಂತಾಗಬೇಕು. ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆತಾಗ ಮಕ್ಕಳ ಭವಿಷ್ಯದ ಬುನಾದಿ ಗಟ್ಟಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ರಾಜ್ಯ ಸರಕಾರಕ್ಕೆ ಆಗ್ರಹಿಸುವ ಮೂಲಕ ಮನವಿ ಮಾಡಬೇಕು ಎಂದು ಹೇಳಿದರು. ಬೀರೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾತನಾಡಿ, ಪ್ರತಿಭೆ ಇದ್ದರೂ ಕೂಡ ಶುಲ್ಕ ಕಟ್ಟಲಾಗದಷ್ಟು ಬಡತನ ಕೆಲವರಲ್ಲಿರುತ್ತದೆ. ಹಾಗಾಗಿ ಧರ್ಮದ ಕೆಲಸ ಮಾಡುತ್ತೇವೆ ಎನ್ನುವವರು ಮೊದಲು ಇಂತಹ ಬಡ ಮಕ್ಕಳ ವಿದ್ಯಾ ಭ್ಯಾಸಕ್ಕೆ ಸಹಕರಿಸಬೇಕು. ಸಂಘ ಸಂಸ್ಥೆಗಳು ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕುವ ಜೊತೆಗೆ ಮಕ್ಕಳಿಗೆ ಕೆಟ್ಟದು ಒಳ್ಳೆಯದರ ಬಗೆಗಿನ ವ್ಯತ್ಯಾಸ ತಿಳಿಸಿ ಕೊಡಬೇಕು. ಆಧುನಿಕ ವಶೀಕರಣ ಯಂತ್ರ ಮೊಬೈಲ್ ನಿಂದ ಮಕ್ಕಳನ್ನು ದೂರ ವಿಡಬೇಕು ಎಂದರು. ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯ ಜಿ.ಟಿ.ರಾಜಶೇಖರ್ ಮಾತನಾಡಿ, ದಿ. ಮಾರ್ಗದ ಮಲ್ಲಪ್ಪ ಮತ್ತು ಶಂಕರಪ್ಪ ಸೇರಿದಂತೆ ಅನೇಕ ಹಿರಿಯರು ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭಕ್ತರ ಸಹಕಾರದಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಪ್ರತಿನಿತ್ಯ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಟ್ರಸ್ಟ್ ಅಧ್ಯಕ್ಷ ಮಾರ್ಗದ ಎಂ.ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡೂರು ಶೈಕ್ಷಣಿಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜುನಾಯ್ಕ, ಸಾಹಿತಿ ಕವಿತಾ ವಿಶ್ವನಾಥ್, ಶ್ರೀಮಲ್ಲಿಕಾರ್ಜುನ ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಯಗಟೀಪುರ ಪ್ರಸನ್ನ, ಮಾರ್ಗದ ಜಿ.ಮಧು, ವೈ.ಎಸ್.ಮಲ್ಲಿಕಾರ್ಜುನಪ್ಪ, ಪಿ.ಎಂ.ಶಿವಕುಮಾರ್, ಎಚ್.ಆರ್.ಕುಮಾರ್ ಮತ್ತಿತರರು ಇದ್ದರು. 12ಕೆಕೆಡಿಯು1.ಯಗಟೀಪುರದ ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ, ಬೀರೂರು ಶ್ರೀಮಾರ್ಗದ ಮಲ್ಲಪ್ಪ ಚಾರಿಟಬಲ್ ಟ್ರಸ್ಟ್ ನಿಂದ ದೇವಾಲಯ ಆವರಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಆಯುಕ್ತ ಎಂ.ಆರ್.ಸೋಮಶೇಖರ್ ಮಾತನಾಡಿದರು.